ನ್ಯೂಸ್ ನಾಟೌಟ್ : ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿದ್ದ ಪತ್ನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿಯುವಲ್ಲಿ ಸುಳ್ಯ ಪೊಲೀಸರು ಸಫಲರಾಗಿದ್ದಾರೆ.
ಎರಡು ದಿನಗಳ ಹಿಂದೆ ಸುಳ್ಯದ ಅಡ್ಕಾರು ಎಂಬಲ್ಲಿ ಪತ್ನಿ ಅಶ್ವಿನಿ ಎಂಬಾಕೆಗೆ ನವೀನ್ ಕುಮಾರ್ ಎಂಬಾತ ಚಾಕುವಿನಿಂದ ಇರಿದಿದ್ದ. ಮಾತ್ರವಲ್ಲ ರಕ್ತ ಸೋರುವುದನ್ನು ಕಾಣುತ್ತಲೇ ಸ್ಥಳದಿಂದ ಪರಾರಿಯಾಗಿದ್ದ. ಜೂ.29ರಂದು ರಾತ್ರಿ ದುರ್ಘಟನೆ ನಡೆದಿತ್ತು.
ಅಶ್ವಿನಿಗೆ ತೀವ್ರ ಗಾಯವಾಗಿತ್ತು. ಈ ವೇಳೆ ಆಟೋ ಚಾಲಕರೊಬ್ಬರಿಗೆ ಕರೆ ಮಾಡಿದ್ದ ಅಶ್ವಿನಿ ತನ್ನ ಪ್ರಾಣ ಉಳಿಸುವಂತೆ ಮನವಿ ಮಾಡಿದ್ದಳು. ತಕ್ಷಣಕ್ಕೆ ಆಟೋ ದಲ್ಲಿ ಬಂದ ಚಾಲಕ ಆಕೆಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ಅಶ್ವಿನಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.