ನ್ಯೂಸ್ ನಾಟೌಟ್: ಗೂಗಲ್ ಮ್ಯಾಪ್ ನೋಡಿಕೊಂಡು ಕಾರಿನಲ್ಲಿ ಬಂದ ಪ್ರಯಾಣಿಕರು ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಡಿಜಿಟಲ್ ಯುಗ ಅಂದ ಮೇಲೆ ಈಗ ಎಲ್ಲರ ಮೊಬೈಲ್ ನಲ್ಲೂ ಗೂಗಲ್ ಮ್ಯಾಪ್ ಇರುತ್ತದೆ. ಅಂತೆಯೇ ಗೂಗಲ್ ಮ್ಯಾಪ್ ನಂಬಿಕೊಂಡು ಆಸ್ಪತ್ರೆಯ ಲೊಕೇಷನ್ ಹಾಕಿ ಯುವಕರಿಬ್ಬರು ತರಾತುರಿಯಿಂದ ಆಸ್ಪತ್ರೆ ಕಡೆಗೆ ಹೊರಟಿದ್ದರು. ಆದರೆ ಆಸ್ಪತ್ರೆ ಸೇರಬೇಕಿದ್ದ ಯುವಕರು ಸ್ವಲ್ಪದರಲ್ಲೇ ನೀರುಪಾಲಾಗುವುದರಿಂದ ಬಚಾವ್ ಆಗಿದ್ದಾರೆ.
ಗೂಗಲ್ ಮ್ಯಾಪ್ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದ ವೇಳೆ ಪಳ್ಳಂಜಿಯ ಎಂಬಲ್ಲಿನ ಹೊಳೆಯ ಸೇತುವೆ ದಾಟುವಾಗ ಈ ಘಟನೆ ಸಂಭವಿಸಿದೆ. ಭಾರಿ ಮಳೆಯಿಂದ ಸಂಪೂರ್ಣವಾಗಿ ಸೇತುವೆ ಜಲಾವೃತಗೊಂಡಿದೆ. ಸೇತುವೆಯ ಎರಡೂ ಬದಿಯಲ್ಲಿ ಯಾವುದೇ ದಂಡೆ ಇಲ್ಲದ ಕಾರಣ ಕಾರು ನೇರವಾಗಿ ಹೋಗಿ ಹೊಳೆಗೆ ಬಿದ್ದಿದೆ.
ಕಾರು ತೇಲುತ್ತಾ ಹೋಗಿದೆ. ಅಲ್ಲೇ ಮರವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದೆ. ತಕ್ಷಣ ಯುವಕರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕರನ್ನು ರಕ್ಷಿಸಿದ್ದಾರೆ.