ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ನನ್ನು ಸೋಮವಾರ ಕುಟುಂಬಸ್ಥರು ಭೇಟಿ ಮಾಡಿದರು.
ಈ ವೇಳೆ ತಾಯಿಯನ್ನು ಕಂಡು ದರ್ಶನ್ ಭಾವುಕರಾಗಿದ್ದಾರೆ. ಮಗನ ಪರಿಸ್ಥಿತಿ ಕಂಡು ತಾಯಿ ಮೀನಾ ಕೂಡ ಕಣ್ಣೀರು ಸುರಿಸಿದ್ದಾರೆ. ಭೇಟಿ ವೇಳೆ ಮಗ ವಿನೀಶ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್ ಮುದ್ದಾಡಿದ್ದಾರೆ. ಸ್ನೇಹಿತರಂತಿದ್ದ ತಂದೆ-ಮಗನ ಸ್ಥಿತಿ ಕಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಇನ್ನು ದರ್ಶನ್ಗೆ ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ.
ದರ್ಶನ್ ಭೇಟಿಯಾಗಲು ಬಂದ ಆತನ ಕುಟುಂಬಸ್ಥರಿಗೆ ಬಂದಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ ಎಂಬ ಮಾತು ಕೇಳಿ ಬಂದಿದೆ. ಜನ ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ರೂಲ್ಸ್ ಹೇಳುವ ಪೊಲೀಸರು, ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಯಾವುದೇ ಕಂಡಿಷನ್ ನೀಡದೆ ಒಳಗೆ ನಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ದರ್ಶನ್ ಕುಟುಂಬ ಜೈಲಿಗೆ ಭೇಟಿ ನೀಡಿದಾಗ ಅವರನ್ನು ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಉದಯ್ ಅವರು ಮಾಧ್ಯಮಗಳ ಕಣ್ತಪ್ಪಿಸಿ ಖಾಸಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ಉದಯ್ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್ ಕುಟುಂಬವನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.