ನ್ಯೂಸ್ ನಾಟೌಟ್: ರಜೆಯ ಮಜಾ ಕಳೆಯಲು ಬಂದಿದ್ದ ಕುಟುಂಬವೊಂದು ಪ್ರವಾಹದ ನೀರಿಗೆ ಸಿಲುಕಿ ಐವರು ಕೊಚ್ಚಿ ಹೋದ ಘಟನೆ ಮುಂಬೈ ಸಮೀಪದ ಲೋನಾವಾಲಾ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ.
ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಎನ್ನಲಾಗಿದ್ದು. ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸೈಯದ್ (9) ಎಂದು ಗುರುತಿಸಲಾಗಿದೆ.
ಪುಣೆ ನಗರದ ಸೈಯದ್ ನಗರ ಮೂಲದ ಕುಟುಂಬವೊಂದರ ಏಳು ಮಂದಿ ಸದಸ್ಯರು ಭಾನುವಾರ ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀರಿನ ಲೋನಾವಾಲಾ ಜಲಪಾತದ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಿದ್ದ ಕಾರಣ ಈ ಕುಟುಂಬದ ಸದಸ್ಯರು ನೀರಿಗಿಳಿದ್ದರು. ಆದರೆ ಏಕಾಏಕಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಯಿತು. ಈ ಸಂದರ್ಭ ನದಿಯ ಮಧ್ಯೆಯ ಬಂಡೆಯಲ್ಲಿ ನಿಂತಿದ್ದ ಕುಟುಂಬಕ್ಕೆ ತಕ್ಷಣ ಪಾರಾಗಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಿದ್ದಂತೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಸಂದರ್ಭ ಏಳು ಮಂದಿಯ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಮಕ್ಕಳು ಸೇರಿದಂತೆ ಐವರು ನೀರುಪಾಲಾಗಿದ್ದಾರೆ. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ಐವರ ಪೈಕಿ 36 ವರ್ಷದ ಮಹಿಳೆ ಮತ್ತು ಇಬ್ಬರು ಬಾಲಕಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಸೋಮವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಒಂದು ಮಗುವಿನ ಮೃತದೇಹ ಪತ್ತೆಯಾಗಿದೆ. ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಕುಟುಂದ ನೀರುಪಾಲಾಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.