ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಅಕಾಲಿಕ ಸಾವು ಅನ್ನುವುದಕ್ಕೆ ಒಂದು ಲೆಕ್ಕವೇ ಸಿಗದಂತಾಗಿದೆ. ಮಹಾಮಾರಿ ಕರೋನಾ ಬಂದು ಹೋದ ಬಳಿಕ ಯುವ ಜನತೆ ಹೆಚ್ಚು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ ಅನ್ನುವ ಮಾತಿಗೆ ಮತ್ತೆ.. ಮತ್ತೆ ಜೀವ ಬಂದಂತಾಗಿದೆ. ಇದೀಗ 24 ವರ್ಷದ ಯುವತಿಯೊಬ್ಬಳು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಕೊಡಗಿನ ಮಡಿಕೇರಿ ತಾಲೂಕಿನಿಂದ ವರದಿಯಾಗಿದೆ.
ಇಲ್ಲಿನ ನೆಲಜಿ ಗ್ರಾಮದ ನಿಲಿಕಾ ಪೊನ್ನಪ್ಪ ಸಾವಿಗೀಡಾಗಿರುವ ನತದೃಷ್ಟೆ. ಈಕೆ ನೆಲಜಿ ಗ್ರಾಮದ ಪ್ರಗತಿಪರ ಕಾಫಿ ಬೆಳೆಗಾರ ಪೊನ್ನಪ್ಪ ಅವರ ಮಗಳು. ಆಕೆ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಿಲಿಕಾ ಎಂದಿನಂತೆ ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಹೊರಟಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವು ಬೆನ್ನಲ್ಲೇ ತನ್ನ ಕೋಣೆಗೆ ಹೋಗಿದ್ದಾಳೆ. ಆ ವೇಳೆ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ. ಮಗಳಿಗೆ ಏನಾಯಿತು ಎಂದು ಹಿಂದಿನಿಂದಲೇ ಹೋಗಿ ತಾಯಿ ವಿಚಾರಿಸುತ್ತಿದ್ದಾಗಲೇ ನಿಲಿಕಾಳ ಜೀವ ಬಾರದ ಲೋಕದತ್ತ ತೆರಳಿದೆ.
ಹಠಾತ್ ಮಗಳನ್ನು ಕಳೆದುಕೊಂಡಿರುವ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಸ್ನೇಹಿತರು, ಬಂಧು ವರ್ಗದವರೂ ಕೂಡ ಶಾಕ್ ಗೆ ಒಳಗಾಗಿದ್ದಾರೆ.