ನ್ಯೂಸ್ ನಾಟೌಟ್: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇದೀಗ ದರ್ಶನ್ ಮತ್ತು ಪ್ರದೋಷ್ ನ ಬಗ್ಗೆ ಹಲವು ಮಾಹಿತಿಗಳನ್ನು ಪೊಲೀಸರು ಹೊರ ತೆಗೆಯುತ್ತಿದ್ದಾರೆ. ನಟ ದರ್ಶನ್ ಬಳಿ ಲೈಸೆನ್ಸ್ ಹೊಂದಿರುವ 2 ಯುಎಸ್ ಮೇಡ್ ಪಿಸ್ತೂಲ್ಗಳಿದ್ದರೆ, ಪ್ರದೋಷ್ (Pradosh) ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇರುವುದು ಬೆಳಕಿಗೆ ಬಂದಿದೆ.
ದರ್ಶನ್ ಮತ್ತು ಪ್ರದೋಷ್ಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯನ್ನು ಪೊಲೀಸರೇ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ವರದಿ ತಿಳಿಸಿದೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಗಣ್ಯ ವ್ಯಕ್ತಿಗಳು ಅನಿವಾರ್ಯದ ಕುರಿತು ದಾಖಲೆ ನೀಡಿ ಶಸ್ತ್ರಾಸ್ತ್ರ ವಾಪಸ್ ನೀಡುವಿಕೆಯಿಂದ ವಿನಾಯಿತಿ ಪಡೆಯಬಹುದಾಗಿದೆ.
ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಬ್ಯುಸಿನೆಸ್ ಮ್ಯಾನ್ ಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ವಶಕ್ಕೆ ಪಡೆಯಬೇಕಾಗಿದೆ. ನಗರದ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು.
ಅತಿ ಗಣ್ಯರಿಗೆ ನೀಡುವ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್ಗೆ ಕೂಡ ವಿನಾಯಿತಿ ನೀಡಿ ಕಳೆದ ಮಾರ್ಚ್ 27 ರಂದು ಬೆಂಗಳೂರು ಪೊಲೀಸ್ ಕಮೀಷನರ್ ದಯಾನಂದ್ ಆದೇಶ ಹೊರಡಿಸಿದ್ದರು. ಸದ್ಯ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ತನಿಖಾಧಿಕಾರಿಗಳು ಆರ್ ಆರ್ ನಗರ ಮತ್ತು ಗಿರಿನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.