ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ.2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರಿಂದ ಎರಡನೇ ಬಾರಿಗೆ ನಟ ಜೈಲು ಸೇರುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹನ್ನೆರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್ನನ್ನು 24ನೇ ಎಸಿಎಂಎಂ ಕೋರ್ಟ್ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷ್ಯಗಳಿವೆ. ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಎ1 ಪ್ರಚೋದನೆಗೆ ದರ್ಶನ್ ಮತ್ತು ಟೀಂ ಒಳಗಾಗಿ ಕೃತ್ಯ ಮಾಡಿದೆ. ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶ ನೀಡಿದರು.
ಕೊಲೆ ಕೇಸ್ ಸಂಬಂಧ ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಮೂರು ಬಾರಿ ದರ್ಶನ್ರನ್ನು ಪೊಲೀಸ್ ಕಸ್ಟಡಿಗೆ (12 ದಿನ) ಪಡೆಯಲಾಗಿತ್ತು. ಇದೀಗ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನುಳಿದ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ.