ನ್ಯೂಸ್ ನಾಟೌಟ್: ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ದೃಢ ನಿರ್ಧಾರ ಮುಖ್ಯ. ವಿದ್ಯಾರ್ಥಿಗಳು ಒಳ್ಳೆಯ ಸಂಕಲ್ಪ, ಗುರು ಹಿರಿಯರ ಆದರ್ಶಗಳನ್ನು ಪಾಲಿಸಿಕೊಂಡು ಸಾಧನೆಯ ಹಾದಿಯತ್ತ ಮುನ್ನುಗ್ಗಬೇಕು ಎಂದು ಸುಳ್ಯದ ಪ್ರೊಬೇಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಜಿದ್ದಿಮನಿ ಅಭಿಪ್ರಾಯಪಟ್ಟರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬುಧವಾರ (ಜೂನ್ 19 )ನೇಚರ್ ಕ್ಲಬ್ ಇದರ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪದವಿ ಶಿಕ್ಷಣ ಅತ್ಯಂತ ಅಮೂಲ್ಯವಾದುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಬೇಕು ಎಂದರು. ಬಳಿಕ ಜೀವ ವಿಜ್ಞಾನ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ಆಯ್ಕೆಗೆ ಇರುವ ಅವಕಾಶಗಳು ಮತ್ತು ಪ್ರಯತ್ನಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ನೇಚರ್ ಕ್ಲಬ್ ನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ. ಇಲ್ಲಿನ ಅನುಭವ ನಾಳೆಯ ನಿಮ್ಮ ಹೊಸ ಬದುಕಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ ಅಧ್ಯಕ್ಷತೆ ವಹಿಸಿದ್ದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿದರು. ಕ್ಲಬ್ ನ ಕಾರ್ಯದರ್ಶಿ ಪವಿತ್ರಾಕ್ಷಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮಧಿವಧಿನಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಉಳಿಕೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ನೇಚರ್ ಕ್ಲಬ್ ಸದಸ್ಯರಾದ ಶಿಲ್ಪಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಯಶಿಕಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದ್ವಿತೀಯ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳು ಔಷಧೀಯ ಸಸ್ಯ ಸೀತಾ ಅಶೋಕ ಗಿಡ ನೀಡಿ ಬೀಳ್ಕೊಟ್ಟರು. ಉಪನ್ಯಾಸಕರಾದ ಸಂಜೀವ ಕುತ್ಪಾಜೆ, ಅಕ್ಷತಾ, ಕೃತಿಕಾ, ಭವ್ಯ ರಜತ್, ಅಜಿತ್ ಕುಮಾರ್, ಪಲ್ಲವಿ ಮತ್ತು ಹರ್ಷಿತ್ ಹಾಗೂ ಸಿಬ್ಬಂದಿ ಶಿವಾನಂದ, ಜಯಂತಿ, ಭವ್ಯ ಮತ್ತು ಗೀತಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.