ನ್ಯೂಸ್ ನಾಟೌಟ್: ಸುಳ್ಯದಲ್ಲಿ ಮಂಗಳವಾರ (ಜೂ.18) ಕೇರಳ ಕಡೆಯಿಂದ ಅನ್ಯಕೋಮಿನ ಯುವಕನ ಜೊತೆ ಹಿಂದೂ ಹುಡುಗಿ ಕಾರಿನಲ್ಲಿ ಬಂದ ಪ್ರಕರಣ ವರದಿಯಾಗಿತ್ತು. ಒಂದಿಷ್ಟು ಮಂದಿ ಹಿಂದೂ ಕಾರ್ಯಕರ್ತರು ಜಾಲ್ಸೂರು ಬಳಿ ಜೋಡಿಯನ್ನು ತಡೆದಿದ್ದರು. ಈ ಪ್ರಕರಣ ಸುಳ್ಯದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಜೋಡಿಯನ್ನು ಠಾಣೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗಿತ್ತು. ಆ ಬಳಿಕ ನಡೆದಿದ್ದೇನು..? ಎನ್ನುವುದರ ಬಗೆಗಿನ ವಿವರ ಇಲ್ಲಿದೆ ಓದಿ.
ಜೋಡಿಯನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಒಂದೊಂದಾಗಿ ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದ್ದಾರೆ. ಈ ವೇಳೆ ಆಕೆ ಹಿಂದೂ ಆತ ಮುಸ್ಲಿಂ ಧರ್ಮೀಯರು ಅನ್ನುವುದು ಗೊತ್ತಾಗಿದೆ. ಪೊಲೀಸರ ಬಳಿ ಯುವತಿ ಮಾಹಿತಿಯನ್ನು ನೀಡುತ್ತಾಳೆ. ನಾನು ಅಪ್ರಾಪ್ತೆ ಅಲ್ಲ, ನನಗೂ ಮದುವೆ ವಯಸ್ಸು ಆಗಿದೆ. ಚಿಂತಿಸುವ ಹಕ್ಕು ಇದೆ ಎಂದು ಹೇಳಿ ಆಧಾರ್ ಕಾರ್ಡ್ ಸಹಿತ ದಾಖಲಾತಿ ನೀಡುತ್ತಾಳೆ. ಯುವಕನನ್ನು ನಾನು ಇಷ್ಟಪಟ್ಟು ಮದುವೆ ಆಗಿದ್ದೇನೆ. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆತನನ್ನು ಬಿಟ್ಟು ಮನೆಗೆ ಬರಬೇಕೆಂದು ಹೇಳಿದರು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ. ಈ ಬಗ್ಗೆ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಗೆ ನಮ್ಮ ಮನೆಯವರು ಹಾಗೂ ನನ್ನ ಪ್ರಿಯಕರನ ಕಡೆಯವರು ಬಂದಿದ್ದಾರೆ. ಹೇಳಬೇಕಿರುವುದನ್ನು ಅಲ್ಲಿ ಸ್ಪಷ್ಟವಾಗಿ ಪೊಲೀಸರ ಎದುರು ಹೇಳಿ ಬಂದಿದ್ದೇನೆ. ಎಫ್ ಐ ಆರ್ ಕೂಡ ರಿಜಿಸ್ಟರ್ ಆಗಿದೆ ಎಂದು ದಾಖಲಾತಿ ತೋರಿಸಿದ್ದಾಳೆ.
ಅತ್ತ ಪೊಲೀಸ್ ಠಾಣೆಯಲ್ಲಿ ಮಗಳು ತಮ್ಮ ಮಾತಿಗೆ ಒಪ್ಪದೆ ಇತ್ತ ಪ್ರಿಯಕರನ ಜೊತೆ ಚೆನ್ನರಾಯಪಟ್ಟಣಕ್ಕೆ ಹೊರಟ ಸಂದರ್ಭದಲ್ಲಿ ಪೋಷಕರು ಹಾಗೂ ಅವರ ಕಡೆಯವರು ಸಿಟ್ಟಿಗೆದ್ದಿದ್ದಾರೆ. ಅನ್ಯಕೋಮಿನ ವ್ಯಕ್ತಿ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಜೋಡಿಯನ್ನು ಜಾಲ್ಸೂರು ಬಳಿ ತಡೆದು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಈ ಎಲ್ಲ ವಿಚಾರವನ್ನು ಪರಿಶೀಲನೆ ನಡೆಸಿದ ಸುಳ್ಯ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಿಂದ ಕ್ರಮಕ್ಕೆ ಮುಂದಾಗುತ್ತಾರೆ. ಸೂಕ್ಷ್ಮ ವಿಚಾರ ಆಗಿದ್ದರಿಂದ ಅಹಿತಕರ ಘಟನೆ ನಡೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಬಹುದು ಎನ್ನುವ ಕಾರಣಕ್ಕೆ ಜೋಡಿಯನ್ನು ಸುಳ್ಯದಿಂದ ಸಂಪಾಜೆ ಗೇಟಿನ ತನಕ ಹಾಗೂ ಅಲ್ಲಿಂದ ಕೊಡಗು ಪೊಲೀಸ್ ರಕ್ಷಣೆಯ ಮೂಲಕ ಚೆನ್ನರಾಯಪಟ್ಟಣಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
Click 👇