ನ್ಯೂಸ್ ನಾಟೌಟ್: ಸುಳ್ಯದ ಕಾಂತಮಂಗಲದ ಶಾಲಾ ವಠಾರದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಫೋಟೋ ಇದೀಗ ಬಿಡುಗಡೆಗೊಂಡಿದೆ. ಕೊಲೆ ಕೃತ್ಯವನ್ನು ನಡೆಸಿದ ಹಂತಕನನ್ನು ಪೊಲೀಸರು ಕೇವಲ 24 ಗಂಟೆಯಲ್ಲಿ ಹೆಡೆಮುರಿ ಕಟ್ಟಿದ್ದರು. ಆರೋಪಿ ಎಡಮಂಗಲ ಮೂಲದ ಉದಯ್ ಎನ್ನುವ ವ್ಯಕ್ತಿಯಾಗಿದ್ದಾನೆ.
ಮೃತ ವಸಂತ್ ಹಾಗೂ ಆರೋಪಿ ಉದಯ್ ಜೊತೆಯಾಗಿ ಕಾಣಿಯೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರದ್ದು ಕೂಡ ಹುಲ್ಲು ಕೊಯ್ಯುವ ಕೆಲಸ. ಭಾನುವಾರ ರಾತ್ರಿ ಇಬ್ಬರು ಕೂಡ ಸುಳ್ಯಕ್ಕೆ ಬಂದಿದ್ದಾರೆ. ಇಬ್ಬರು ಕೂಡ ಬಾರ್ ವೊಂದರಲ್ಲಿ ಕುಡಿದಿದ್ದಾರೆ. ಮದ್ಯಪಾನದ ಮತ್ತಿನಲ್ಲಿ ಕಾಂತಮಂಗಲದಲ್ಲಿ ಒಬ್ಬರಿಗೊಬ್ಬರು ಜಗಳವಾಡಿಕೊಂಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದೆ.
ಈ ಹಂತದಲ್ಲಿ ಉದಯ್ ತಂದೆ-ತಾಯಿಗೆ ವಸಂತ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಉದಯ್ ವಸಂತ್ ನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಭಾನುವಾರ ತಡರಾತ್ರಿ ಕೊಲೆಯಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂತಾ ಮಂಗಲ ಶಾಲಾ ವಠಾರದಲ್ಲಿ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿತ್ತು. ಪೊಲೀಸರು, ಶ್ವಾನ ದಳ ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕಿನಿಂದ ಸಾಗಿತ್ತು.