ನ್ಯೂಸ್ ನಾಟೌಟ್: “ವ್ಯಕ್ತಿಯೊಬ್ಬ ಸುಮಾರು ಮೂವತ್ತು ದಿನದ ಹಿಂದೆ ಸತ್ತಿರಬಹುದು. ಮೃತ ದೇಹ ಕೊಳೆತು ಸುತ್ತಮುತ್ತ ಗಬ್ಬು ನಾರುತ್ತಿತ್ತು. ಮನುಷ್ಯ ಆದವನು ಹತ್ತಿರಕ್ಕೂ ಹೋಗಲಿಕ್ಕಿಲ್ಲ. ಸ್ವಂತ ಮನೆಯವರೇ ಹತ್ತಿರ ಹೋಗೋಕೆ ಧೈರ್ಯ ಮಾಡಿಲ್ಲ ಅಂತೀನಿ. ಆ ಸಂದರ್ಭದಲ್ಲಿ ಆ ಕೊಳೆತ ಹೆಣ ಎತ್ತೋಕೆ ಒಂದು ಜೊತೆ ಗ್ಲೌಸ್ ಹಾಕ್ಕೊಂಡು ಅಂಜಿಕೆ ಇಲ್ಲದೆ ಏಕಾಂಗಿಯಾಗಿ ಇಳಿದಿದ್ದೇ ಅಚ್ಚು’ ಎಂದು ಇತ್ತೀಚೆಗೆ ಮಡಪ್ಪಾಡಿ ಮೂಲದ ವ್ಯಕ್ತಿಯೊಬ್ಬರು ಸ್ಮರಿಸಿಕೊಂಡ ನೆನಪು ನನಗೆ.
ಮೊದಲೇ ನಾನು ಹೇಳಿ ಬಿಡುತ್ತೇನೆ..ಅಚ್ಚು ಅಲಿಯಾಸ್ ಅಬ್ದುಲ್ ರಜಾಕ್ ಪ್ರಚಾರದಿಂದ ದೂರ. ಎಲೆ ಮರೆಯ ಕಾಯಿ. ತಾನಾಯಿತು ತನ್ನ ಕೆಲಸ ಆಯಿತು ಅಂತ ಬದುಕೋ ಜೀವ. ಕ್ಯಾಮೆರಾ ಎಂದರೆ ಅಲರ್ಜಿ. “ಸರ್ ಅದೆಲ್ಲ ಈಗ ಬೇಡ” ಅಂತ ಹೇಳುವ ನೇರ ಸ್ವಭಾವ. ಹಾಗಂತ ಮೀಡಿಯಾದವರ ಹತ್ತಿರ ಮಾತಾಡಲ್ಲ ಅಂತ ಅಲ್ಲ. ಸ್ವಲ್ಪ ಹೆಚ್ಚೇ ಮಾತಾಡ್ತಾರೆ. ಈ ನಡುವೆ ನಾನು ನಿಮ್ಮದೊಂದು ಸ್ಟೋರಿ ಮಾಡ್ತೇನೆ.. ನಾಳೆ ಕ್ಯಾಮೆರಾ ತಗೊಂಡು ಬರ್ತಿನಿ.. ಅಂದ್ರೆ ಸಾಕು, “ಬೇಡ ಸರ್..” ಅಂತ ಹೇಳಿ ಅಚ್ಚು ಎಸ್ಕೇಪ್ ಆಗ್ತಾರೆ.
ಅಚ್ಚುವಿನದ್ದು ನೇರ ನಡೆ ನುಡಿಯ ಸ್ವಭಾವ. ತಾನು ಮಾತಾಡೋದರಿಂದ ಮತ್ತೊಬ್ಬರಿಗೆ ನೋವಾಗಬಹುದು ಅನ್ನುವ ಅರಿವು ಕೂಡ ಅವರಿಗಿಲ್ಲ. ಹೇಳುವುದನ್ನು ನೇರವಾಗಿಯೇ ಖಂಡಾತುಂಡವಾಗಿ ಹೇಳುವ ಸ್ವಭಾವ. ಇದು ಕೆಲವರಿಗೆ ಇಷ್ಟವಾಗದು. ಇದೆಲ್ಲದರ ಹೊರತಾಗಿಯೂ ಅಚ್ಚುವಿನ ಬಳಿ ಓರ್ವ ಮಾನವೀಯ ನಿಷ್ಕಲ್ಮಶ ಹೃದಯವಂತ ಇದ್ದಾನೆ. ಇದನ್ನು ನಾನು ಪ್ರತ್ಯಕ್ಷವಾಗಿ ನೋಡಿ ಅರ್ಥ ಮಾಡಿಕೊಂಡಿದ್ದೇನೆ. ಇದಕ್ಕೊಂದು ತಾಜಾ ಉದಾಹರಣೆಯನ್ನು ನೀಡುತ್ತೇನೆ ನೋಡಿ..
ಸುಳ್ಯದ ಕಾಂತಮಂಗಲದಲ್ಲಿ ಭಾನುವಾರ (ಜೂ.೧೬) ರಾತ್ರಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸೋಮವಾರ ಬೆಳಕಿಗೆ ಬಂದಿತ್ತು. ಅಚ್ಚುವಿಗೆ ಒಂದು ಕಾಲ್ ಮಾಡಿ ಪ್ರಕರಣದ ಬಗ್ಗೆ ಕೇಳೋಣ ಅಂತ ಅಂದುಕೊಂಡು ಮೊಬೈಲ್ ಎತ್ತಿಕೊಂಡೆ. “ಅರೆ ಇವತ್ತು ಬಕ್ರೀದ್ ಹಬ್ಬ ಅಲ್ವಾ..ಇವತ್ತಾದರೂ ಒಂದು ದಿನ ಕುಟುಂಬದ ಜೊತೆ ಸಂತೋಷವಾಗಿರಲಿ.. ಸುಮ್ಮನೆ ಡಿಸ್ಟರ್ಬ್ ಮಾಡೋದು ಬೇಡ” ಅಂತ ಅಂದುಕೊಂಡೆ. ಕೆಲಸದ ವಿಚಾರ ಬೇಡ ಹಾಗೆ ಫೋನ್ ಮಾಡೋಣ ಹಬ್ಬದ ಶುಭಾಶಯ ಹೇಳೋಣ ಅಂತ ಕಾಲ್ ಮಾಡಿದೆ. ಅತ್ತ ಕಡೆಯಿಂದ ಕಾಲ್ ರಿಸೀವ್ ಮಾಡಿದ ಅಚ್ಚು “ಹೇಳಿ ಸರ್ ಅಂದ್ರು”, “ಹಬ್ಬದ ಶುಭಾಶಯಗಳು ಒಳ್ಳೆಯದಾಗಲಿ” ಎಂದೆ.. “ಸರ್ ಹಬ್ಬ ಎಲ್ಲಿ ನಾನು ಇವತ್ತು ಇಲ್ಲಿ ಕಾಂತಮಂಗಲದಲ್ಲಿ ಇದ್ದೇನೆ. ಇಲ್ಲೊಂದು ಮರ್ಡರ್ ಆಗಿದೆ. ಬಾಡಿ ಬಿದ್ದಿದೆ. ನಾನಿನ್ನು ಮನೆಗೆ ಹೋಗೊದು ಎಷ್ಟೊತ್ತಿಗೊ ಗೊತ್ತಿಲ್ಲ. ತನಿಖೆ ಪೂರ್ಣಗೊಂಡು ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿದ ಬಳಿಕ ಮನೆಗೆ ಹೋಗೋದು” ಅಂದರು… “ಹಾಗಾದರೆ ನಿಮಗೆ ಇವತ್ತು ಹಬ್ಬವಿಲ್ಲ.. ವರ್ಷಕ್ಕೊಮ್ಮೆ ಬರೋದಲ್ವಾ..? ಅಂತ ಮರು ಪ್ರಶ್ನೆ ಹಾಕಿದೆ. “ಹಬ್ಬ ಹೌದು ಸರ್.. ನಮ್ಮ ಸಮುದಾಯದಲ್ಲಿ ಹಬ್ಬಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ಕೆಲಸದಲ್ಲಿಯೇ ನಾನು ಹಬ್ಬವನ್ನು ಕಾಣುತ್ತೇನೆ ಅಂತ’ ಅಚ್ಚು ಉತ್ತರ ನೀಡಿದ್ರು.
ಈ ಮಾತು ನನ್ನ ಹೃದಯವನ್ನು ತಟ್ಟಿತು. ಈ ವಿಚಾರವನ್ನು ಯಾಕೆ ಇಲ್ಲಿ ಹೇಳ್ತಿದ್ದೀನಿ ಅಂದರೆ ಅಚ್ಚು ಪ್ರಚಾರಕ್ಕೆ ಬಯಸಿದ ವ್ಯಕ್ತಿಯಲ್ಲ. ನಾನು ಬರೆದು ಹಾಕಬೇಕು ಅಂತ ಬಯಸಿದವರೂ ಅಲ್ಲ. ಬರೆಯುತ್ತೇನೆ ಅಂತ ಹೇಳಿದ್ರೆ ಬೇಡ ಅಂತಾಲೇ ಹೇಳುವ ಜನ. ಆದರೆ ಇಂತಹ ನಿಸ್ವಾರ್ಥ ಸೇವೆ ಮಾಡುವ ಜನರ ಪರವಾಗಿ ಬರೆಯದಿದ್ದರೆ ನಾವು ಪತ್ರಿಕೋದ್ಯಮದಲ್ಲಿದ್ದೂ ವೇಸ್ಟ್ ಅಂತ ಅಂದುಕೊಂಡೆ. ನೋಡಿ ನಮ್ಮಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅಂತ ಇದೆ. ಅದು ಎಂಥೆಂಥವರಿಗೋ ಸಿಗುತ್ತದೆ. ಇಂತಹ ನಿಸ್ವಾರ್ಥ ಜೀವಗಳಿಗೆ ಯಾಕೆ ಸಿಗಲ್ಲ..?, ನಿಜವಾಗಿಯೂ ಇಂತಹವರಿಗೆ ಅರ್ಹವಾಗಿ ಆ ಪ್ರಶಸ್ತಿ ಸಲ್ಲಬೇಕು. ಆಗಲೇ ಅಂತಹ ಪ್ರಶಸ್ತಿಗಳಿಗೆ ನಿಜವಾದ ಮೌಲ್ಯ ಸಿಗೋದು, ಒಂದು ಅರ್ಥ ಬರೋದು. ನಮ್ಮ ಸುಳ್ಯ ಶಾಸಕರಾಗಿರುವ ಭಾಗೀರಥಿ ಮುರುಳ್ಯ ಅವರೇ ದಯವಿಟ್ಟು ಈ ಸಲ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಇಂತಹ ಅರ್ಹ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಿ ಅಂತ ನಾವು ನ್ಯೂಸ್ ನಾಟೌಟ್ ಪರವಾಗಿ ಮನವಿ ಮಾಡುತ್ತೇವೆ.
ರೀ…ಒಂದಲ್ಲ ಎರಡಲ್ಲ ಬರೋಬ್ಬರಿ 5 ಸಾವಿರಕ್ಕೂ ಅಧಿಕ ಶವಗಳನ್ನು ಎತ್ತಿದ ಅಸಾಮಾನ್ಯ ವ್ಯಕ್ತಿ ಈತ. ಅದೆಷ್ಟೋ ಸುಳಿ ಇರುವ ಅಪಾಯಕಾರಿ ಗುಂಡಿಗಳಿಂದ ಶವವನ್ನು ಮೇಲೆತ್ತಿದ ಸಾಹಸಿಗ. ಸಾವಿರಾರು ಶವ ಪರೀಕ್ಷೆಯಲ್ಲಿ ಭಾಗಿಯಾಗಿರುವ ಗಟ್ಟಿ ಗುಂಡಿಗೆಯ ಯುವಕ. ಇವರು ತೆಗೆದ ಕೊಳೆತ ಶವಗಳಿಗೆ ಲೆಕ್ಕವೇ ಇಲ್ಲ. ನೀರಿಗೆ ಬಿದ್ದು ಮೃತಪಟ್ಟಿದ್ದಿರಲಿ, ಅಪಘಾತದಲ್ಲಿ ಮೃತಪಟ್ಟಿದ್ದಿರಲಿ, ಆತ್ಮಹತ್ಯೆ ಮಾಡಿಕೊಂಡಿರಲಿ, ಅನಾಥ ಶವ ಸಿಕ್ಕಿರಲಿ ಎಲ್ಲದಕ್ಕೂ ಅಚ್ಚು ಪ್ರಗತಿ ಆಂಬ್ಯುಲೆನ್ಸ್ ಬೇಕೇ ಬೇಕು.
ನೀವು ವೈದ್ಯರನ್ನ ಕೇಳಿ, ಪೊಲೀಸ್ ಅಧಿಕಾರಿಗಳನ್ನ ಕೇಳಿ ಅಚ್ಚು ಅಂದರೆ ‘ನಡೆದಾಡುವ ದೇವರು’ ಅಂತಾರೆ..ಯಾಕೆಂದರೆ ಹುಳಗಳು ತುಂಬಿದ, ಯಾರೂ ಮುಟ್ಟದ, ಕೊಳೆತು ನಾರುವ ಮೃತದೇಹಗಳನ್ನು ಕೈಯಿಂದ ಬಾಚಿ ಎತ್ತೋಕೆ ಸಾಮಾನ್ಯರಿಗೆ ಸಾಧ್ಯವೇ..? ಅದಕ್ಕೂ ಒಂದು ದೇವರ ಆಶೀರ್ವಾದ ಬೇಕು. ಇದಕ್ಕಿಂತ ಹೆಚ್ಚು ಇನ್ನೇನು ಹೇಳೋಕೆ ಸಾಧ್ಯ.
ಅಚ್ಚು ಮೂಲತಃ ಸುಳ್ಯ ಸಮೀಪದ ಪೆರಾಜೆಯ ಕಲ್ಚರ್ಪೆಯವರು. ತಂದೆ ಇಬ್ರಾಹಿಂ, ತಾಯಿ ಫಾತಿಮಾ ದಂಪತಿಯ 5ನೇ ಮಗ. ಓದಿದ್ದು ಆರನೇ ಕ್ಲಾಸ್. ವೃತ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕ. ಸುಳ್ಯದಲ್ಲಿ ಪ್ರಗತಿ ಆಂಬ್ಯುಲೆನ್ಸ್ ಅಂತ ಯಾರನ್ನಾದರೂ ಕೇಳಿದ್ರೆ ಸಾಕು, ಅದು ನಮ್ಮ ಅಚ್ಚುದು ಅಂತ ಜನ ಹೇಳ್ತಾರೆ. ಒಂದು ಜೀವವನ್ನು ಉಳಿಸೋಕೆ ತನ್ನ ಜೀವವನ್ನೇ ಪಣಕ್ಕಿಟ್ಟು ವೇಗವಾಗಿ ಹೋಗುವ ಧೈರ್ಯವಂತ. ಅದೆಷ್ಟೇ ಟ್ರಾಫಿಕ್ ಇರಲಿ, ಅಡೆ ತಡೆ ಇರಲಿ, ಆಂಬ್ಯುಲೆನ್ಸ್ ನಲ್ಲಿರುವ ರೋಗಿಯ ಜೀವ ಉಳಿಸುವುದಷ್ಟೇ ಅಚ್ಚು ಗುರಿಯಾಗಿರುತ್ತೆ.
ಅಚ್ಚುಗೆ ಬಾಲ್ಯದಿಂದಲೂ ಜನರ ಕಷ್ಟಕ್ಕೆ ಜೊತೆಯಾಗುವ ಆಂಬ್ಯುಲೆನ್ಸ್ ಚಾಲಕನಾಗಬೇಕೆನ್ನುವ ಕನಸು. ಅರ್ಧದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿದರು, ಸಣ್ಣ ಪುಟ್ಟ ಕೆಲಸ ಮಾಡಿದ ಬಳಿಕ ಹನ್ನೊಂದು ವರ್ಷಗಳ ಹಿಂದೆ ಆಂಬ್ಯುಲೆನ್ಸ್ ಚಾಲಕನಾಗುವ ಕನಸನ್ನು ಈಡೇರಿಸಿಕೊಂಡರು. ಅಲ್ಲಿಂದ ಇಲ್ಲಿ ತನಕ ಅಚ್ಚು ಪ್ರಯಾಣ ನಿಂತಿಲ್ಲ. ಆಂಬ್ಯುಲೆನ್ಸ್ ತೆಗೆದ ನಂತರ ಸುಳ್ಯ ನಗರದಲ್ಲಿ ಎಲ್ಲೇ ಅನಾಥ ಶವ ಬಿದ್ದಿದ್ದರೂ ತೆಗೆದುಕೊಂಡು ಹೋಗುವುದು ಪ್ರಗತಿಯ ಅಚ್ಚು.
ಈ ಆಂಬ್ಯುಲೆನ್ಸ್ ಉದ್ಯೋಗ ಲಾಭದಾಯಕವಾಗಿಲ್ಲ. ಕೆಲವು ಸಲ ಹಣ ಬರ್ತದೆ ಇನ್ನೂ ಕೆಲವು ಸಲ ಹಣವೇ ಸಿಗಲ್ಲ, ನಮ್ಮದು ಸಮಾಜ ಸೇವೆಯೇ ಹೆಚ್ಚು ಎಂದು ಅಚ್ಚು ನೋವಿನಿಂದ ಹೇಳ್ತಾರೆ. ಹೀಗಿದ್ದರೂ ಇವರದ್ದೊಂದು ಪುಟ್ಟ ಸಂಸಾರವಿದೆ. ಪತ್ನಿ ರಸಿಯಾ, ಮಗ ಮೊಹಮ್ಮದ್ ರಾಝಿ, ಮಗಳು ಆಯೇಷಾ ರಿಝಾ ತಂದೆಯ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದು ಇವರ ಸಾಧನೆಗೆ ಶಕ್ತಿ. ಇಂತಹವರನ್ನು ಸಮಾಜ ಗುರುತಿಸಿ ಗೌರವಿಸಬೇಕಿದೆ. ಈ ಮಾತು ಹೌದು ಎನಿಸುವುದಾದರೆ ಇದನ್ನು ಆದಷ್ಟು ಶೇರ್ ಮಾಡಿ ಜಿಲ್ಲಾಧಿಕಾರಿಯ ಗಮನಕ್ಕೆ ಬರುವಂತೆ ಮಾಡಿ. ಇಂತಹ ಶ್ರಮಿಕ ವರ್ಗಕ್ಕೂ ಸಿಗಲಿ ಗೌರವ.