ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಅವರ ಇಟಲಿ ಪ್ರವಾಸದ ಕುರಿತು ಕಾಂಗ್ರೆಸ್ ಪಕ್ಷದ ಕೇರಳ ಘಟಕ ಮಾಡಿದ್ದ ಲೇವಡಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕ್ಷಮಾಪಣೆ ಕೋರಿದೆ.
ಜಿ7 ಶೃಂಗಸಭೆಗೆ ಇಟಲಿಯ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿವಿಧ ದೇಶಗಳ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದ ಅವರು, ಪೋಪ್ ಫ್ರಾನ್ಸಿಸ್ ಅವರನ್ನು ಸಹ ಭೇಟಿಯಾಗಿದ್ದರು. ಇಬ್ಬರೂ ಪರಸ್ಪರ ಆಲಂಗಿಸುವ ಫೋಟೋಗಳು ವೈರಲ್ ಆಗಿದ್ದವು. ಇದನ್ನು ಕೇರಳ ಕಾಂಗ್ರೆಸ್ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಅಣಕಿಸಿ ಪೋಸ್ಟ್ ಮಾಡಿತ್ತು. ವಿವಾದದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಪ್ರಧಾನಿ ಮೋದಿ ಪೋಪ್ ಜತೆಗೆ ಇರುವ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ಘಟಕವು, “ಪೋಪ್ ಅವರಿಗೆ ದೇವರನ್ನು ಭೇಟಿ ಮಾಡುವ ಅವಕಾಶ ಕೊನೆಗೂ ದೊರಕಿದೆ” ಎಂದು ಟೀಕಿಸಿತ್ತು.
ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ಸಂದರ್ಶನವೊಂದರಲ್ಲಿ, ತಮ್ಮನ್ನು ದೇವರು ಒಂದು ಉದ್ದೇಶಕ್ಕೆ ಕಳುಹಿಸಿದ್ದಾನೆ ಎಂಬುದು ಮನವರಿಕೆಯಾಗಿದೆ ಎಂಬುದಾಗಿ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಈ ಟೀಕೆ ಮಾಡಲಾಗಿತ್ತು ಎನ್ನಲಾಗಿದೆ. ವ್ಯಾಪಕ ಆಕ್ರೋಶದ ಬಳಿಕ ಕೇರಳ ಕಾಂಗ್ರೆಸ್ ಘಟಕವು ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. “ಕ್ರೈಸ್ತರ ಭಾವನೆ ಅಥವಾ ಮಾನಸಿಕ ಆಘಾತಕ್ಕೆ ಕಾರಣವಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ” ಎಂದು ಹೇಳಿದೆ. ಯಾವುದೇ ಧರ್ಮ ಅಥವಾ ಧಾರ್ಮಿಕ ನಾಯಕರನ್ನು ಅವಮಾನಿಸುವ ಉದ್ದೇಶ ತನಗೆ ಇರಲಿಲ್ಲ. ಆದರೆ ಪ್ರಧಾನಿ ಮೋದಿ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳು ಟೀಕೆಗಳಿಂದ ಹೊರತಲ್ಲ ಎಂದು ಪ್ರತಿಪಾದಿಸಿದೆ ಎನ್ನಲಾಗಿದೆ.
Click 👇