ನ್ಯೂಸ್ ನಾಟೌಟ್: ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಸನ್ಮಾನ ಮಾಡಿದರು. ಅದನ್ನು ನೋಡಿ ಪ್ರೇರಿತನಾಗಿ 2010 ರಿಂದ ನಾನೂ ರಕ್ತದಾನಕ್ಕೆ ಮನಸ್ಸು ಮಾಡಿದೆ. ಸುಳ್ಯ ರೋಟರಿಯ ಅಧ್ಯಕ್ಷನಾದಾಗ ಅದು ನನ್ನ ಬದ್ಧತೆ ಮತ್ತು ಜವಾಬ್ದಾರಿಯೂ ಆಗಿತ್ತು.
ಮೊದಲ ಬಾರಿ ಆಗಸ್ಟ್ 15 ರಂದು ಸಂಯೋಜಿಸುತ್ತಿದ್ದ ರಕ್ತದಾನ ಶಿಬಿರ, ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ ಹಾಗೂ ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಒಟ್ಟು ವರುಷಕ್ಕೆ ಮೂರು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರಕ್ತದಾನ ಶಿಬಿರದಲ್ಲಿ ಎನ್.ಎಸ್.ಎಸ್ , ಎನ್.ಸಿ.ಸಿ, ರೆಡ್ ಕ್ರಾಸ್ ವಿದ್ಯಾರ್ಥಿಗಳನ್ನು ಒಳಗೊಳ್ಳೂವಂತೆ ಮಾಡಿದುದರಿಂದ ಯುವ ಜನರಿಗೆ ಇದು ಪ್ರೇರಣೆಯಾಯಿತು.
ಮೊದಲ ಸಲ ರಕ್ತದಾನ ಮಾಡಿದಾಗ ಇದ್ದ ಭಯ ನಿಧಾನವಾಗಿ ಕರಗಿ ಆ ಜಾಗದಲ್ಲಿ ಸಂತಸ ಅರಳಿತು. ಮುಂದೆ ನಿರಂತರ ಅಂದಾಜು 30 ಬಾರಿ ರಕ್ತದಾನ ಮಾಡಿ ರಾಜ್ಯ ಮಟ್ಟದ ರಕ್ತದಾನಿ ಎಂದು ಗುರುತಿಸಲ್ಪಟ್ಟೆ. ಈ ಪರಿಣಾಮ ಬೆಂಗಳೂರಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಸನ್ಮಾನಗೊಂಡು ಮುಂದಿನ ಕೆಲಸಕ್ಕೆ ಪ್ರೇರಣೆ ಆಯಿತು ಎಂಬುವುದರಲ್ಲಿ ಸಂಶಯವಿಲ್ಲ.
ರಕ್ತದಾನದಿಂದ ಬರೀ ದೇಹಾನಂದ ಒಂದೇ ಅಲ್ಲ ಮಾನಸಿಕವಾಗಿಯೂ ನೈತಿಕವಾಗಿಯೂ ವಿಶೇಷ ಬಲ ಬರುತ್ತದೆ. ನಮ್ಮ ರಕ್ತ ಇನ್ನೊಂದು ದೇಹಕ್ಕೆ ಸೇರುವುದು, ಜಾತಿ ಮತ ಧರ್ಮ ರಹಿತವಾಗಿ ಅದು ಮತ್ತೊಂದು ಮನುಷ್ಯ ಜೀವವನ್ನು ಪೋಷಿಸುವುದು- ಇವೆಲ್ಲವೂ ಒಂದು ಭಾವನಾತ್ಮಕ ಬಲವನ್ನು ನೀಡುತ್ತದೆ. ನಮ್ಮ ಆರೋಗ್ಯದೊಂದಿಗೆ ಇತರರಿಗೂ ನೆರವಾಗುವ ಬಹಳ ಸುಲಭದ ಪ್ರಕ್ರಿಯೆಯೆಂದರೆ ಅದು ರಕ್ತದಾನ.
ರಕ್ತಕ್ಕೆ ಪರ್ಯಾಯ ಆಗಬಹುದಾದ ಇನ್ನೊಂದು ದ್ರವ ವಸ್ತುವನ್ನು ಇದುವರೆಗೆ ಯಾವ ವಿಜ್ಞಾನಕ್ಕೂ ಕಂಡುಹಿಡಿಯಲಾಗಲಿಲ್ಲ. ಹಾಗಾಗಿ ರಕ್ತ ರಕ್ತವೇ ಅದಕ್ಕೆ ಯಾವತ್ತೂ ಪರ್ಯಾಯವಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಆಗದೆ ಇರುವ ಕಾರಣ ದಾನದಿಂದ ಮಾತ್ರ ಪಡೆಯಲು ಸಾಧ್ಯ. ಆರೋಗ್ಯವಂತ ವ್ಯಕ್ತಿಗೆ ಮಾತ್ರ ರಕ್ತವನ್ನು ದಾನ ಮಾಡಲು ಸಾಧ್ಯವಾಗುವುದು. ಅದು ಅವರ ಕರ್ತವ್ಯವೆಂದು ಭಾವಿಸಿ ಅನಾರೋಗ್ಯ ಪೀಡಿತರಿಗೆ ಗಾಯಗೊಂಡವರನ್ನು ಬದುಕಿಸಲು ನೆರವಾಗುವುದು.
ರಕ್ತದಾನ ಮಾಡಿದ ನಂತರ ಪ್ರತಿಗಂಟೆಗೊಮ್ಮೆ ಒಂದು ಗ್ಲಾಸು ನೀರನ್ನು ಕುಡಿಯುತ್ತಿರಬೇಕು. ಇದು ರಕ್ತದ ಉತ್ಪತ್ತಿಗೆ ಕಾರಣವಾಗುತ್ತದೆ. 24 ಗಂಟೆಯಲ್ಲಿ ರಕ್ತದ ಉತ್ಪಾದನೆ ಆರಂಭಗೊಂಡು ದಾನ ಮಾಡಿದ ಎರಡು ವಾರದಲ್ಲಿ ರಕ್ತದ ಕೊರತೆ ಅಂಶಗಳು ಸಂಪೂರ್ಣವಾಗಿ ತುಂಬಿಕೊಳ್ಳುತ್ತವೆ.
18 ರಿಂದ 65 ವರುಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಗಂಡಸರು ಮೂರು ತಿಂಗಳಿಗೊಮ್ಮೆ, ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಮ್ಮ ದೇಹದ ಹಿಮೋಗ್ಲೋಬಿನ್ ಅಂಶ ನಿಮಗೆ ಉಚಿತವಾಗಿ ತಿಳಿಯುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂಗಿಂತ ಹೆಚ್ಚಿರಬೇಕು. ದೇಹದ ತೂಕ 45 ಕೆ ಜಿ ಗಿಂತ ಹೆಚ್ಚಿರಬೇಕು.
ರಕ್ತ ಹೀನತೆ, ಏಡ್ಸ್, ಜಾಂಡಿಸ್, ಮಲೇರಿಯಾ, ಸಿಫಿಲಿಸ್ ಖಾಯಿಲೆಯವರು ಮತ್ತು ಕುಡಿತದ ಚಟವಿರುವವರು ಗರ್ಭಿಣಿ ಸ್ತ್ರೀಯರು ಮತ್ತು ಹೃದಯದ ಖಾಯಿಲೆಯಿರುವವರು ರಕ್ತದಾನ ಮಾಡಬಾರದು. ರಕ್ತದಾನ ಮಾಡಿದವರು ದಪ್ಪವಾಗುತ್ತಾರೆ. ರಕ್ತದಾನ ಮಾಡಿದರೆ ಸಪೂರವಾಗುತ್ತಾರೆ. ಹೆಚ್ಚು ತೂಕವಿರುವವರಲ್ಲಿ ರಕ್ತ ಹೆಚ್ಚಿರುತ್ತದೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಚಾಲ್ತಿಯಲ್ಲಿವೆ.
ರಕ್ತದಾನದ ಮಹತ್ವ ಸರಿಯಾದ ಮಾಹಿತಿ ಜನಸಾಮಾನ್ಯರಿಗೆ ತಲುಪಬೇಕಾಗಿದೆ. ರಕ್ತದಾನ ಮಾಡುವುದರಿಂದ ಶರೀರಕ್ಕೆ ಯಾವುದೇ ರೀತಿಯ ತೊಂದರೆಯಾಗಲೀ ಖಾಯಿಲೆಯಾಗಲೀ ಬರುವುದಿಲ್ಲ. ನೀವೂ ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಜೀವವಾಗಿ.
ಯಾರಿವರು ಸಂಜೀವ ಕುದ್ಪಾಜೆ..?
ಸಂಜೀವ್ ಕುದ್ಪಾಜೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಿರುವ ಮಾರ್ಗದರ್ಶಿ. ಸಮಾಜಮುಖಿ, ಸರಳ ಜೀವಿ. ಇವರಿಗೆ ವಿಶ್ವ ರಕ್ತದಾನಿಗಳ ದಿನದಂದು ಬೆಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ, ಅವರು ಮಾಡಿದ ರಕ್ತದಾನ ಮಹೋನ್ನತ ಸಾಧನೆಗಾಗಿ ರಾಜ್ಯಮಟ್ಟದ ಗೌರವವನ್ನು ನೀಡಿ ಸನ್ಮಾನಿಸಿದೆ.
ಎನ್ ಎಂಸಿ ಕಾಲೇಜಿನ ಯೂತ್ ರೆಡ್ ಕ್ರಾಸ್ ಯುನಿಟ್ ನ ಪ್ರೋಗ್ರಾಮ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕಿನ ಸಕ್ರಿಯ ನಿರ್ದೇಶಕರಾದ ಸಂಜೀವ ಕುದ್ಪಾಜೆ ಯವರು ರಾಜ್ಯಮಟ್ಟದ ರಕ್ತದಾನಿಯಾಗಿ ಗುರುತಿಸಿಕೊಂಡಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಜಿಲ್ಲೆಯಾದ್ಯಂತ ರಕ್ತದಾನಿಗಳನ್ನು ಸಂಘಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ.
ಸುಮಾರು 26 ವರ್ಷಗಳಿಂದ ಎನ್ ಎಸ್ ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುದ್ಪಾಜೆಯವರು, ತಮ್ಮ ಕಾಲೇಜಿನ 25ನೇ ಕ್ಯಾಂಪಿನ ಮುಂದಾಳತ್ವವನ್ನು ಇದೇ ತಿಂಗಳು ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ. ಇದರ ಜೊತೆಗೆ ರೋಟರಿ ಕ್ಲಬ್ ನಲ್ಲಿ 22 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕುದ್ಪಾಜೆಯವರು, ಅಧ್ಯಕ್ಷರಾಗಿದ್ದ ವೇಳೆ ಬಳ್ಪ ಗ್ರಾಮಕ್ಕೆ 8 ಲಕ್ಷ ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ, ರೋಟರಿ, ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಕ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮರ ಸುಳ್ಯ ರಮಣೀಯ ಸುಳ್ಯ ಎಂಬ ನಗರ ಪಂಚಾಯತ್ ಸಹಭಾಗಿತ್ವದಲ್ಲಿ ಪ್ರತಿ ಗುರುವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮದಲ್ಲೂ ಕೈ ಜೋಡಿಸಿದ್ದಾರೆ.
ಇದರ ಜೊತೆಗೆ ಜನಸಾಮಾನ್ಯರಿಗೆ ಅತ್ಯಂತ ಅನುಕೂಲ ಆಗುವಂತಹ…. ಹಣ್ಣು, ತರಕಾರಿ, ಜೇನು, ಅಣಬೆ, ಗಿಡ ಮತ್ತು ಬೀಜ ವಿನಿಮಯ ಇತ್ಯಾದಿ 25ಕ್ಕೂ ಹೆಚ್ಚು ವಿವಿಧ ಉಪಯುಕ್ತ ವಾಟ್ಸಾಪ್ ಗುಂಪು ರಚಿಸಿ, ಜನರನ್ನು ಒಗ್ಗೂಡಿಸಿ `ಮರಳಿ ಪರಿಸರಕ್ಕೆ ಬನ್ನಿ’ಎನ್ನುವ ಸಂದೇಶ ಸಾರುತ್ತಿದ್ದಾರೆ. ತಮ್ಮ ಮನೆಯಲ್ಲೂ ನೂರಾರು ಬಗೆಯ ಕಳ್ಳಿ ಗಿಡಗಳು, ವಿವಿಧ ಹಣ್ಣು, ಹೂವಿನ ಗಿಡಗಳಿಗೆ ಕಸಿ ಕಟ್ಟುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪತ್ನಿ ಮುಖ್ಯೋಪದ್ಯಾಯೆ ಧನಲಕ್ಷಿ ಕುದ್ಪಾಜೆ, ಹಾಗೂ ಮಕ್ಕಳ ಸಹಕಾರದಿಂದ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ.