ನ್ಯೂಸ್ ನಾಟೌಟ್: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಯಾತ್ರೆಗೆ ಅನುಮತಿ ಕೋರಿ ಬೆಂಗಳೂರಿನ ಬಾಲಕಿಯೊಬ್ಬಳು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಈ ಮನವಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಒಂದಷ್ಟು ನಿಯಮಗಳಿವೆ. ಅದರಲ್ಲೂ 10 ರಿಂದ 15 ವರ್ಷದ ಮಹಿಳೆಯರು ಶಬರಿಮಲೆ ದರ್ಶನ ಪಡೆಯಬಾರದು ಎನ್ನುವ ವಿಚಾರವನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಇದು ಇಂದು ನಿನ್ನೆಯದಲ್ಲ. ಬಹಳಷ್ಟು ವರ್ಷಗಳಿಂದ ನಡೆದು ಬಂದ ಹಿಂದೂ ಸಂಸ್ಕೃತಿಯ ಆಚರಣೆಯಾಗಿದೆ.
ಈ ಆಚರಣೆಯನ್ನು ಬ್ರೇಕ್ ಮಾಡಿ ಶಬರಿಮಲೆ ಪ್ರವೇಶ ಮಾಡುವುದಕ್ಕೆ ಬಾಲಕಿ ಕೇಳಿಕೊಂಡಿದ್ದಳು. ಕೇರಳ ಹೈಕೋರ್ಟ್ ಮೆಟ್ಟಿಲೇರಿದರೂ ಬಾಲಕಿಗೆ ಭಾರಿ ನಿರಾಸೆಯಾಗಿದೆ.
ಹತ್ತು ವರ್ಷಕ್ಕೂ ಮೊದಲೇ ಶಬರಿ ಮಲೆ ಪ್ರವೇಶಿಸುವುದಕ್ಕೆ ಕೋವಿಡ್ ಹಾಗೂ ತಂದೆಯ ಅನಾರೋಗ್ಯ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ನನಗೆ ತೆರಳುವುದಕ್ಕೆ ಸಾಧ್ಯವಾಗಿರಲಿಲ್ಲ. ಹತ್ತು ವರ್ಷಗಳ ವಯೋಮಿತಿ ತಾಂತ್ರಿಕವಾಗಿದೆ. ಇನ್ನೂ ಸಹ ಋತುಚಕ್ರ ಆರಂಭವಾಗಿಲ್ಲದ ಕಾರಣ ವಯೋಮಿತಿಯನ್ನು ಲೆಕ್ಕಿಸದೆ ದೇಗುಲ ಪ್ರವೇಶಿಸುವುದಕ್ಕೆ ನನಗೆ ಅನುಮತಿ ಕೊಡಬೇಕೆಂದು’ ಬಾಲಕಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಹರಿಶಂಕರ್ ವಿ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೇಳಿದ್ದು ಹೀಗೆ, ಸದ್ಯ ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಷಯವು ಸುಪ್ರೀಂ ಕೋರ್ಟ್ ಪೀಠದ ಮುಂದಿದೆ. ಹೀಗಾಗಿ ಈ ಅರ್ಜಿಯನ್ನು ಪುರಸ್ಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಮಾತ್ರವಲ್ಲ ದೇಗುಲಕ್ಕೆ ಪ್ರವೇಶವಿಲ್ಲ ಎಂಬ ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿನಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.