ಸಂಪಾಜೆ: ದಕ್ಷಿಣ ಕನ್ನಡ ಜಿಲ್ಲೆಯನ್ನೇ ನಡುಗಿಸಿದ್ದ ಭಾರಿ ಪ್ರಮಾಣದ ಸಂಪಾಜೆ ದರೋಡೆ ಪ್ರಕರಣದಲ್ಲಿ ಒಟ್ಟು 15 ಮಂದಿ ಭಾಗಿಯಾಗಿದ್ದಾರೆ. ದರೋಡೆಯ ಪ್ರಮುಖ ರೂವಾರಿ ತಲೆಮರೆಸಿಕೊಂಡಿದ್ದಾನೆ, ಆತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ ಅನ್ನುವ ಮಾಹಿತಿಯನ್ನು ಪೊಲೀಸರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ತನಿಖೆ ನೇತೃತ್ವ ವಹಿಸಿರುವ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ‘ಸಂಪಾಜೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದೇವೆ. ಈ ಪ್ರಕರಣದಲ್ಲಿ ಒಟ್ಟು 15 ಮಂದಿ ಭಾಗಿಯಾಗಿದ್ದಾರೆ. ಭಾರಿ ದೊಡ್ಡ ತಂಡವೊಂದು ಕೃತ್ಯ ಎಸಗಿದೆ ಅನ್ನುವ ಮಾಹಿತಿ ಸಿಕ್ಕಿದೆ. ದರೋಡೆಯ ಮಾಸ್ಟರ್ ಪ್ಲಾನ್ ರೂಪಿಸಿದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಎಲ್ಲರನ್ನೂ ಶೀಘ್ರವೇ ನಾವು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
ಸದ್ಯ ಬಂಧನಕ್ಕೆ ಒಳಗಾದವರನ್ನು ತಮಿಳುನಾಡು ಮೂಲದ ಕಾರ್ತಿಕ್ (38 ), ನರಸಿಂಹನ್ (40 ), ಹಾಸನ ಮೂಲದ ಯಧು ಕುಮಾರ್ (33 ), ದೀಕ್ಷಿತ್ (26 ) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಐದು ಮೊಬೈಲ್, ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಮಾ 20 ರಂದು ಸಂಪಾಜೆಯ ಚಟ್ಟೆಕಲ್ಲಿನ ಅಂಬಾಶ್ರಮದ ನಿವಾಸಿ ಜ್ಯೋತಿಷಿ, ಅರ್ಚಕ ಅಂಬರೀಶ್ ಭಟ್ ಅವರ ಮನೆಯಿಂದ 1,50,000 ರು. ನಗದು ಹಾಗೂ 100 ಗ್ರಾಂ ಚಿನ್ನವನ್ನು ಮಹಿಳೆಯರಿಗೆ ಎಳನೀರು ಕೊಚ್ಚುವ ಮಚ್ಚು ತೋರಿಸಿ ಬೆದರಿಸಿ ಕದ್ದೊಯ್ದಿದ್ದರು. ಈ ಪ್ರಕರಣ ಜನಮಾನಸದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.