ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಮಾನವ ಮತ್ತು ವನ್ಯ ಮೃಗಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಾನೆಗಳು ಕೊಡಗಿನ ಹಲವು ಕಡೆ ಮಾನವನ ಬದುಕಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ಇದೀಗ ಸುಂಟಿಕೊಪ್ಪ ಸಮೀಪದ ಹೊಸಕೋಟೆಯ ಹೆದ್ದಾರಿಯಲ್ಲಿ ಆನೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ದಿಢೀರ್ ಎರಗಿ ದಾಳಿ ಮಾಡಿದೆ.
ಕಾಫಿ ತೋಟದ ಒಳಗಿನಿಂದ ಹಠಾತ್ ರಸ್ತೆಗೆ ನುಗ್ಗಿದ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿ ಸ್ಥಳದಿಂದ ತೆರಳಿದೆ. ಈ ಆನೆಯ ನಂತರ ಮತ್ತೊಂದು ಕಾಡಾನೆಯೂ ಅಲ್ಲಿ ಪ್ರತ್ಯಕ್ಷಗೊಂಡಿದೆ. ಕಾರಿನಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರ, ಸುಂಟಿಕೊಪ್ಪ ಭಾಗದಲ್ಲಿ ನಿತ್ಯ ಕಾಡಾನೆಗಳ ಕಿರಿಕಿರಿಗೆ ಜನ ಹೈರಾಣಾಗಿದ್ದಾರೆ. ವಾಹನ ಸವಾರರಂತೂ ಭಯದಲ್ಲೇ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Click 👇