ನ್ಯೂಸ್ ನಾಟೌಟ್: ಈ ಮಳೆಗಾಲ ಶುರುವಾಯಿತೆಂದರೆ ಸಾಕು, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಲೈನ್ ಮ್ಯಾನ್ ಗಳ ಪಾಡು ಯಾರಿಗೂ ಬೇಡ. ಮೊದಲೇ ಕಾರ್ಮಿಕರಿಲ್ಲದೆ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಗೋಳು ಹೇಳತೀರದು.
‘ಅಲ್ಲಿ ಕರೆಂಟ್ ಇಲ್ಲ, ಇಲ್ಲಿ ಕರೆಂಟ್ ಇಲ್ಲ, ಲೈನ್ ಮ್ಯಾನ್ ಎಲ್ಲಿದ್ದಾನಪ್ಪ’ ಅಂತ ಕೇಳೋರೇ ಜಾಸ್ತಿ. ಈ ಮಧ್ಯೆಯೇ ರಿಸ್ಕ್ ತೆಗೆದುಕೊಂಡು ಲಗುಬಗನೆ ಕಂಬಕ್ಕೆ ಹತ್ತಿ ‘ಕರೆಂಟ್ ಬಂತು ನೋಡಿ’ ಅಂತ ಆನ್ಸರ್ ಕೊಡೋರು ನಮ್ಮ ಲೈನ್ ಮ್ಯಾನ್ ಗಳೆ.. ಈ ಪವರ್ ಮ್ಯಾನ್ ಗಳ ಕೆಲಸ ನಾವು ಅಂದುಕೊಂಡಷ್ಟು ಸುಲಭದ್ದಲ್ಲ. ಮಳೆಗಾಲದಲ್ಲಿ ಸ್ವಲ್ಪ ರಿಸ್ಕ್ ಜಾಸ್ತಿನೇ. ಎಲ್ಲಿ ಯಾವಾಗ ಏನಾಗುತ್ತೋ ಅನ್ನೋದೇ ಗೊತ್ತಿರಲ್ಲ. ಬೆಳಗ್ಗೆ ಬರ್ತೀನಿ ಅಂತ ಮನೆಯಲ್ಲಿ ಹೇಳಿ ಹೊರಟಿರುತ್ತಾರೆ. ಆದರೆ ಎಷ್ಟೋ ಸಲ ಸಂಜೆ ಮನೆಗೆ ತಲುಪುವ ಗ್ಯಾರಂಟಿಯೇ ಅವರಿಗಿರಲ್ಲ. ನೀರು, ಬೆಂಕಿ, ಗಾಳಿ ಜೊತೆ ಸರಸವಾಡೋ ಸಾಹಸ ಮಾಡಲೇಬಾರದು. ಅಂತಹುದರಲ್ಲಿ ಕರೆಂಟ್ ಜೊತೆ ಸರಸವಾಡೋದು ಸಣ್ಣ ವಿಚಾರ ಅಲ್ಲ ಅಲ್ವಾ..?
ಮಳೆಗಾಲದಲ್ಲಿ ಆಗಾಗ್ಗೆ ಲೈನ್ ಫಾಲ್ಟ್ ಬರೋದು ಸಹಜ. ಒಂದು ಕಡೆ ರಿಪೇರಿ ಮಾಡುವಾಗ ಮತ್ತೊಂದು ಕಡೆಯಲ್ಲಿ ಮರ ಬಿದ್ದು ಇಡೀ ದಿನ ಮಾಡಿದ ಕೆಲಸವೆಲ್ಲ ಹಾಳಾಗಿರುತ್ತದೆ. ಮಳೆ ಗಾಳಿ ಅಂದರೆ ಹಾಗೆನೆ ಅಲ್ವಾ..? ಗಿಡದ ರೆಂಬೆ ತಾಗಿ ಅಥವಾ ತೆಂಗಿನ ಗರಿ ತಾಗಿ ಟ್ರಿಪ್ ಆದರೆ ಸಾಕು ಕರೆಂಟ್ ಪಟ್ ಅಂತ ಹೋಗಿ ಬಿಡುತ್ತೆ. ‘ಅಯ್ಯೋ ಈಗಷ್ಟೇ ಕರೆಂಟ್ ಬಂದಿತ್ತು. ಈಗ ಮತ್ತೆ ಹೋಯಿತಾ, ಈ ಲೈನ್ ಮ್ಯಾನ್ ಮತ್ತು ಇಲಾಖೆಯವರು ಎಲ್ಲಿ ಹಾಳಾಗಿ ಹೋದ್ರು’ ಅಂತ ಕೆಲವರು ಹಿಡಿಶಾಪ ಹಾಕುವವರನ್ನು ನೋಡಿದ್ದೇವೆ. ಆದರೆ ಅತ್ತ ಲೈನ್ ಮ್ಯಾನ್ ಈಗಷ್ಟೇ ಆ ಲೈನ್ ಅನ್ನು ಸರಿ ಮಾಡಿ ಬಂದು ಕುಳಿತುಕೊಳ್ಳುವಷ್ಟರಲ್ಲಿ ಆ ಭಾಗದಲ್ಲಿ ಮರ ಬಿದ್ದು ಮತ್ತೆ ಕಂಪ್ಲೀಟ್ ಒಂದು ದಿನದ ಕೆಲಸ ಮಾಡಬೇಕಾದ ಅನಿವಾರ್ಯತೆ ಆತನ ಎದುರಾಗಿರುತ್ತೆ.
ಬೆಸ್ಟ್ ಅಂದ್ರೆ ಮಳೆಗಾಲದಲ್ಲಿ ಊರಿನ ಯುವಕರ ತಂಡ ರಚಿತವಾಗಬೇಕು. ತಮ್ಮ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಒಂದು ದಿನವಿಡೀ ಶ್ರಮದಾನ ಮಾಡಿ ಲೈನ್ ಗೆ ತಾಗುತ್ತಿರುವ ಗಿಡಗಂಟಿಗಳನ್ನೆಲ್ಲ ತುಂಡರಿಸಲು ಪವರ್ ಮ್ಯಾನ್ ಗೆ ನೆರವಾಗಬೇಕು. ಲೈನ್ ಮ್ಯಾನ್ ಗಳ ಜೊತೆಗೆ ಯುವಕರೆಲ್ಲರು ಸೇರಿ ಶ್ರಮದಾನ ಮಾಡಿದರೆ ಊರಿನಲ್ಲಿ ಬೆಳಕಿನ ಅಡ್ಡಿಗಿರುವ ಸಮಸ್ಯೆಗಳು ಶೇ.80ರಷ್ಟು ನೀಗಬಹುದು. ಕೇವಲ ಕರೆಂಟ್ ಬರ್ತಿಲ್ಲ ಅಂದ ಮಾತ್ರಕ್ಕೆ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ಅವರಿಗೆ ನಾವು ಯಾವ ರೀತಿಯಲ್ಲಿ ಸಹಕಾರ ಕೊಡಬಹುದು ಅನ್ನುವುದನ್ನು ಕೂಡ ಚಿಂತನೆ ಮಾಡಬೇಕಿದೆ.
ಈ ಮಾತನ್ನು ಯಾಕೆ ಹೇಳುತ್ತಿದ್ದೀನಿ ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಪಡ್ಕ ಎಂಬಲ್ಲಿ ಆ ಭಾಗದ ಊರಿನ ಯುವಕರೆಲ್ಲರು ಸೇರಿಕೊಂಡು ಸ್ಥಳೀಯ ಪವರ್ ಮ್ಯಾನ್ ಸಂಗಮೇಶ್ ಜೊತೆ ಕೈ ಜೋಡಿಸಿ ಒಂದು ದಿನವಿಡೀ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಲೈನ್ ಗೆ ತಾಗುತ್ತಿದ್ದ ಗಿಡ ಗಂಟಿಗಳನ್ನು ತೆಗೆಯಲು ನೆರವಾಗಿದ್ದಾರೆ. ಇಂತಹ ಯುವಕರ ಸಂಖ್ಯೆ ಜಿಲ್ಲೆಯ ಗ್ರಾಮೀಣ ಭಾಗದಾದ್ಯಂತ ಸಿದ್ಧವಾಗಬೇಕಿದೆ. ಇಂತಹ ಪ್ರಯತ್ನಕ್ಕೊಂದು ಮೆಚ್ಚುಗೆ ಸೂಚಿಸೋಣ. ಏನಂತೀರಾ..? ನಿಮ್ಮ ಊರಿನಲ್ಲೂ ಇಂತಹ ಪ್ರಯತ್ನ ನಡೆದಿದ್ದರೆ ಪವರ್ ಮ್ಯಾನ್ ಜೊತೆಗಿನ ನಿಮ್ಮ ಫೋಟೋ ಊರಿನ ವಿವರ ಸಹಿತ ನಮ್ಮ ‘ನ್ಯೂಸ್ ನಾಟೌಟ್‘ 8277118599 ವಾಟ್ಸಾಪ್ ಸಂಖ್ಯೆಗೆ ಕಳುಹಿಸಿಕೊಡಿ. ನಮ್ಮಲ್ಲಿ ಪ್ರಕಟಿಸುತ್ತೇವೆ.
Click 👇