ನ್ಯೂಸ್ ನಾಟೌಟ್: ಅತ್ತ ದಿಲ್ಲಿಯಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನಕ್ಕೆ ಸಿದ್ಧವಾಗುತ್ತಿದ್ದರೆ ಇತ್ತ ಕೊಡಗು ಸಂಪಾಜೆಯಲ್ಲಿ ಆದರ್ಶ ಫ್ರೆಂಡ್ಸ್ ಕ್ಲಬ್ ಚಡಾವು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಸ್ಮರಣೀಯವನ್ನಾಗಿಸುತ್ತಿದೆ.
ಮಾವು, ಪೇರಳೆ, ನೇರಳೆ, ಜುಟ್ಟು ಹಣ್ಣು ಸೇರಿದಂತೆ 50ಕ್ಕೂ ಹೆಚ್ಚು ಗಿಡಗಳನ್ನು ರಸ್ತೆಯ ಬದಿಗಳಲ್ಲಿ ನೆಡಲಾಗುತ್ತಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುವಕರ ತಂಡ ಗಿಡಗಳನ್ನು ನೆಡುವ ಕಾಯಕದಲ್ಲಿ ತೊಡಗಿಕೊಂಡಿದೆ. ಕೊಡಗು ಸಂಪಾಜೆಯ ಶಾಲೆಯ ಬಳಿಯಿಂದ ಚಡಾವು ತನಕ ಗಿಡಗಳನ್ನು ನೆಡುವ ಕಾರ್ಯಕ್ರಮ ಇದಾಗಿದೆ. ಸುಮಾರು 1 ಕಿ.ಮೀ. ತನಕ ಗಿಡಗಳನ್ನು ನೆಡುತ್ತಿರುವುದು ವಿಶೇಷವಾಗಿದೆ.
ಗಿಡಗಳನ್ನು ನೆಡುವುದು ಮಾತ್ರವಲ್ಲ ಅವುಗಳ ಸಂರಕ್ಷಣೆಗೂ ಆದರ್ಶ ಫ್ರೆಂಡ್ಸ್ ವಿನೂತನವಾಗಿ ಚಿಂತನೆ ನಡೆಸಿದೆ. ಬೇಸಿಗೆಯಲ್ಲಿ ನೀರು ಹಾಕುವುದಕ್ಕೆ ಅವುಗಳನ್ನು ಪೋಷಣೆ ಮಾಡುವುದಕ್ಕೆ ರಸ್ತೆ ಬದಿಯಲ್ಲಿರುವ ಅಂಗಡಿಯವರಿಗೆ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ನೆಟ್ಟಿರುವ ಗಿಡಗಳ ಸುತ್ತ ದನಗಳು ಗಿಡಗಳಿಗೆ ಹಾನಿ ಮಾಡಬಾರದು ಎನ್ನುವ ಕಾರಣಕ್ಕೆ ತಡೆಬೇಲಿ ನಿರ್ಮಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೊಡಗು ಸಂಪಾಜೆಯ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಕಳಗಿ ಬಾಲಚಂದ್ರ, ಜಗದೀಶ್ ಕೆದಂಬಾಡಿ, ಆದರ್ಶ ಫ್ರೆಂಡ್ಸ್ ಅಧ್ಯಕ್ಷ ಸುನಿಲ್ ಸಂಪಾಜೆ, ಗೌರವಾಧ್ಯಕ್ಷ ಉದಯ್ ಚಡಾವು, ಸಂಪಾಜೆ ಪಯಸ್ವಿನಿ ಸೊಸೈಟಿ ನಿರ್ದೇಶಕ ಯಶವಂತ ದೇವರಗುಂಡ, ಆದರ್ಶ ಫ್ರೆಂಡ್ಸ್ ಚಡಾವು ಸದಸ್ಯರು ಹಾಜರಿದ್ದರು.
Click 👇