ನ್ಯೂಸ್ ನಾಟೌಟ್: ತಮಿಳುನಾಡಿನಲ್ಲಿ ಬಿಜೆಪಿಯ ಮತಗಳಿಕೆ ಹಿಂದೆಂದಿಗಿಂತಲೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿದೆ. ಇದರ ಹಿಂದಿನ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಎನ್ನಲಾಗಿದೆ. ಈ ಹಿನ್ನೆಲೆ ಅಣ್ಣಾ ಮಲೈ ಚುನಾವಣೆಯಲ್ಲಿ ಸೋತಿದ್ದರೂ, ಪಕ್ಷದ ವರ್ಚಸ್ಸು ಹೆಚ್ಚಾಗಿರುವ ಕಾರಣ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಅಣ್ಣಾಮಲೈ ಈ ಕುರಿತು ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಸಚಿವ ಸ್ಥಾನ, ರಾಜ್ಯಪಾಲರ ಸ್ಥಾನ ನೀಡಿದಂತೆಯೇ ಈ ಬಾರಿಯೂ ಪಕ್ಷದ ನಾಯಕತ್ವ ಖಂಡಿತಾ ಸಚಿವ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ದೇಶಾದ್ಯಂತ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಎಲ್ಲ ವಿವರಗಳು ಮೋದಿ ಬಳಿ ಇದ್ದು, ಅವುಗಳನ್ನು ಪರಿಶೀಲಿಸಿದ ನಂತರ ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕೆಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಅಣ್ಣಾಮಲೈ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂದು ಕಾರ್ಯಕರ್ತರು ಮತ್ತು ಅಭಿಮಾನಿಗಳ ಒತ್ತಾಯ ಹೆಚ್ಚಾಗಿದೆ ಎನ್ನಲಾಗಿದೆ.
Click 👇