(ಲೇಖನ ಸಂಗ್ರಹ, ವರದಿ ವಿಶ್ಲೇಷಣೆ: ಹರ್ಷಿತಾ ವಿನಯ್)
ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆಸ್ಪತ್ರೆಗಳಲ್ಲಿ ಅನಗತ್ಯ ಶಸ್ತ್ರಚಿಕಿತ್ಸೆ ನಡೆಸಿ ರೋಗಿ ಕಡೆಯವರಿಗೆ ದೊಡ್ಡ ಬಿಲ್ ಹಾಕುವುದನ್ನು ನೋಡಿದ್ದೇವೆ. ಅನಗತ್ಯ ಆಪರೇಷನ್ ಗಳಿಂದ ಒಳ್ಳೆಯ ದುಡ್ಡು ಮಾಡಿಕೊಂಡು ಆಸ್ಪತ್ರೆ ಬೆಳೆಯಬಹುದು, ಆದರೆ ರೋಗಿ ಇಹಲೋಕವನ್ನೇ ತ್ಯಜಿಸುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಹೀಗಾಗಿ ಯಾರಾದರೂ ವೈದ್ಯರು ನಿಮಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದರೆ ತಕ್ಷಣ ನೀವು ಗಡಿಬಿಡಿಗೆ ಒಳಗಾಗಿ ಆಪರೇಷನ್ ಮಾಡಿಸಿಕೊಳ್ಳಬೇಡಿ. ಮೊದಲಿಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿ, ಬೇರೆ ವೈದ್ಯರಿಂದ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಿ. ಇದಿಷ್ಟು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಅಸಿಸ್ಟೆಂಟ್ ಪ್ರೊಫೆಸರ್ (ಶಾಲಾಕ್ಯ ತಂತ್ರ ವಿಭಾಗ) ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಬರೆದ ಅಂಕಣದ ಹೈಲೈಟ್ಸ್ .. ಯಾವ ರೀತಿಯ ಆಪರೇಷನ್ ಗಳಿಂದ ಅಪಾಯವಿದೆ. ಅನಗತ್ಯ ಆಪರೇಷನ್ ಅಂದರೆ ಏನು..? ಜಗತ್ತಿನಲ್ಲಿ ಅದರಿಂದ ಆಗಿರುವ ಅನಾಹುತಗಳು ಏನು..? ಅನ್ನುವುದರ ಬಗೆಗಿನ ಕಂಪ್ಲೀಟ್ ವರದಿಯನ್ನು ವಿವರಿಸಿದ್ದಾರೆ. ಈ ಬಗೆಗಿನ ಒಂದು ಇಣುಕು ನೋಟ ಇಲ್ಲಿದೆ ಓದಿ.
ಅನಗತ್ಯ ಶಸ್ತ್ರಚಿಕಿತ್ಸೆಗಳಿಂದ ಹಲವಾರು ಅನಾಹುತಗಳು ಸಂಭವಿಸಿವೆ. 1974ರಲ್ಲಿ 2.4ಮಿಲಿಯ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಲ್ಲದೆ ಅದರಲ್ಲಿ ಸತ್ತವರ ಸಂಖ್ಯೆ 11,900. 2001ರಲ್ಲಿ 7.5 ಮಿಲಿಯ ಅನಗತ್ಯ ಶಸ್ತ್ರಚಿಕಿತ್ಸೆಗಳಲ್ಲಿ ಸತ್ತವರ ಸಂಖ್ಯೆ 37,136. ಅಲ್ಲಿನ ತಜ್ಞರೇ ಹೇಳುವ ಪ್ರಕಾರ, ಅನಗತ್ಯ ಶಸ್ತ್ರಚಿಕಿತ್ಸೆಗಳ ಅಂಕಿ-ಅಂಶಗಳನ್ನು ನಿಖರವಾಗಿ ಹೇಳುವುದು ಕಷ್ಟ. 1989 ರಲ್ಲಿ, Leape ಎಂಬ ತಜ್ಞರ ಪ್ರಕಾರ, ಶೇ. 30 ರಷ್ಟು ಅನಗತ್ಯ ಶಸ್ತ್ರಚಿಕಿತ್ಸೆಗಳಲ್ಲಿ ಸಿಸೇರಿಯನ್ ಹೆರಿಗೆ, ಟಾನ್ಸಿಲ್ ಶಸ್ತ್ರಕ್ರಿಯೆ, ಎಪೆಂಡಿಕ್ಸ್ ಶಸ್ತ್ರಕ್ರಿಯೆ, ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ (ಹಿಸ್ಟರೆಕ್ಟಮಿ), ಬೊಜ್ಜಿಗೆ ನಡೆಸುವ ಗ್ಯಾಸ್ಟ್ರೆಕ್ಟಮಿ ಸ್ತನಗಳ ಇಂಪ್ಲಾಂಟ್ ಒಳಗೊಂಡಿವೆ. ಶೇ.17.6 ರಷ್ಟು ಸೂಚಿಸಲಾದ ಶಸ್ತ್ರಚಿಕಿತ್ಸೆಗಳು ವೈದ್ಯಕೀಯದಲ್ಲಿ ಇನ್ನೊಬ್ಬ ವೈದ್ಯರಿಂದ ಎರಡನೆಯ ಅಭಿಪ್ರಾಯ (Second opition) ಕೇಳದೆ ಮಾಡಲಾದ ಶಸ್ತ್ರಚಿಕಿತ್ಸೆಗಳು. ಮತ್ತೆ ಮುಂದುವರಿದ ಅಧ್ಯಯನಗಳ ಪ್ರಕಾರ ಅಧಿಕೃತವಾಗಿ, ವರ್ಷಕ್ಕೆ 2.4 ಮಿಲಿಯದಷ್ಟು ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಮತ್ತು ಅನಗತ್ಯ 11,900 ಸಾವುಗಳು ಸಂಭವಿಸುತ್ತವೆ. 1995ರಲ್ಲಿ ಬೆನ್ನಿನ ಮೇಲೆ ನಡೆಸಲಾದ ಶಸ್ತ್ರಚಿಕಿತ್ಸೆಗಳ ಬಗ್ಗೆ ಇಂಥದ್ದೇ ಸಮಿಕ್ಷೆ ನಡೆಸಿದರು. ಅಮೆರಿಕಾದಲ್ಲಿ ಅದರ ಪ್ರಕಾರ ನಡೆಸಲಾದ 2,50,000 ಬೆನ್ನಿನ ಶಸ್ತ್ರಚಿಕಿತ್ಸೆಗಳಲ್ಲಿ 44,000 ಶಸ್ತ್ರಚಿಕಿತ್ಸೆಗಳು ಅನಗತ್ಯವಾಗಿದ್ದವು.
ಯಾವ ರೀತಿಯಲ್ಲಿ ವೈದ್ಯರ ಔಷಧಗಳ ಬರೆಯುವಿಕೆ ಮತ್ತು ಬಳಕೆಯ ಮೇಲೆ ಟಿ.ವಿ ಜಾಹಿರಾತುಗಳ ಪ್ರಭಾವ ಇರುವುದೋ ಅಂಥದ್ದೇ ಪ್ರಭಾವ ಅನಗತ್ಯವಾದ ಶಸ್ತ್ರಚಿಕಿತ್ಸೆಗಳ ಮೇಲೂ ಇದೆ. ಜಾಹೀರಾತು ಪ್ರೇರಿತ ಸರ್ಜರಿ! ಬೊಜ್ಜಿಗೆ ಸಂಬಂಧಿಸಿದ ಹಾಗೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಹಾಲಿವುಡ್ ರೂಪದರ್ಶಿಗಳ ಜಾಹೀರಾತುಗಳಿಂದ ಪ್ರಭಾವಿತವಾಗಿರುತ್ತವೆ. ಮಾದಕ ಹಾಗೂ ಮನಮೋಹಕವೆಂದು ಜನರ ಗಮನ ಸೆಳೆಯಲಾಗುತ್ತವೆ. ಅದಕ್ಕೊಂದು ಮಧುರ ಹಿನ್ನೆಲೆ ಸಂಗೀತವೂ ಇರುತ್ತದೆ. ಅಂತರ್ಜಾಲ ಮಾರುಕಟ್ಟೆಯಲ್ಲಿ ಇದು ಯಥೇಚ್ಛವಾಗಿದೆ.
ಸ್ಪೇನ್ ನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಅಲ್ಲಿ ಮಾಡಿದ ಶೇ. 20ರಿಂದ 25 ಸರ್ಜರಿಗಳು ಅನಗತ್ಯವಾದದ್ದು. 1983ರಿಂದ 1994ರ ಅವಧಿಯಲ್ಲಿ, ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಶೇ.38ರಷ್ಟು ಹೆಚ್ಚಾದವು. 1994ರಲ್ಲಿ ಕಣ್ಣಿನ ಪೊರೆಯ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆ ಸರ್ವೇ ಸಾಮಾನ್ಯವಾಯಿತು. 2 ಮಿಲಿಯದಷ್ಟು ಕ್ಯಾಟರಾಕ್ಟ್ ಸರ್ಜರಿ ನಡೆದು ಮೊದಲ ಸ್ಥಾನದಲ್ಲಿ ನಿಂತಿತು. ನಂತರ ಸಿಸೇರಿಯನ್ ಹೆರಿಗೆ, ಅನಂತರ ಹರ್ನಿಯಾ ಸರ್ಜರಿ ಹೆಚ್ಚಿನ ಸಂಖ್ಯೆಯಲ್ಲಿತ್ತು. ಮೊಣಗಂಟು ಸಮಸ್ಯೆಗೆ ನಡೆಸಲಾಗುವ ಶಸ್ತ್ರಚಿಕಿತ್ಸೆಗಳೂ ಅಧಿಕವಾದವು. ಆದರೆ ಅವುಗಳನ್ನು ನಡೆಸಿದ ನಂತರ ಉಂಟಾದ ಹಾನಿಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಾಡಿಲ್ಲ ಎಂಬುದು ಆತಂಕದ ವಿಷಯ.
ಸಿಸೇರಿಯನ್ ಹೆರಿಗೆ, ಹೊಟ್ಟೆಯ ಸರ್ಜರಿಗಳ ಸಂದರ್ಭದಲ್ಲಿ ಬೆನ್ನುಹುರಿಗೆ ಅನೆಸ್ತೇಸಿಯಾ ನೀಡಲು ಬಳಸಲಾದ ನಳಿಕೆಗಳು ಸರಿಯಾಗಿ (sterile) ಸೂಕ್ಷ್ಮಾಣುರಹಿತ ವಿಧಾನ ಅನುಸರಿಸದ ಕಾರಣದಿಂದ ಗಂಭೀರ ಸೋಂಕು ಉಂಟುಮಾಡಿ ಕಾಲುಗಳು ನಿಷ್ಕ್ರಿಯವಾಗುವುದಕ್ಕೆ ಕಾರಣವಾದವು. coronary Angiography, ಹೃದಯದ ರಕ್ತನಾಳ ಸರ್ಜರಿ, cardiac pacemaker ಅಳವಡಿಕೆ, ಜಠರದ ಎಂಡೋಸ್ಕೋಪಿ, ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳು (ಹೆಚ್ಚಾಗಿ ಬೆನ್ನುನೋವಿಗೆ ಮಾಡುವ) ಅನಗತ್ಯವಾಗಿ, ಅಧಿಕ ಪ್ರಮಾಣದಲ್ಲಿ ನಡೆಸಿರುವುದು ಅಲ್ಲಿ ಕಂಡುಬಂದಿತ್ತು.
ಹಾಗೆಯೇ ವೈದ್ಯಕೀಯ ಶಸ್ತ್ರಚಿಕಿತ್ಸೆ ವಿಧಾನಗಳಿಗೆ ಒಳಗಾಗುವಾಗ ಮರಣಪ್ರಮಾಣಗಳನ್ನು ಗಮನಿಸುವುದು ಮುಖ್ಯ. ಶಸ್ತ್ರಚಿಕಿತ್ಸೆಯ ಮೊದಲು ಒಳಗಾಗುವವರು ಅನುಮತಿ ನೀಡಿ ಸಹಿ ಹಾಕುತ್ತಾರಾದರೂ ಅವರಲ್ಲಿ ಬಹುಜನರಿಗೆ ಆ ಶಸ್ತ್ರಚಿಕಿತ್ಸೆಯಲ್ಲಿ ಆಗುವ ಅಪಾಯಗಳ ಮಾಹಿತಿ ಇರುವುದಿಲ್ಲ ಅಥವಾ ಮಾಹಿತಿ ನೀಡಬೇಕಾದವರು ನೀಡಿರುವುದಿಲ್ಲ. ದುರಾದೃಷ್ಟವೆಂದರೆ, ಎಷ್ಟೋ ಸಲ, ಅಲೋಪಥಿ ಔಷಧಗಳೇ ಮರಣದ ಪ್ರಮುಖ ಕಾರಣವಾಗಿರುತ್ತವೆ. “Health care” ಅಥವಾ ಆರೋಗ್ಯ ರಕ್ಷಣೆಯೆಂಬ ಶಬ್ದವು, ಔಷಧಕ್ಷೇತ್ರ ಎಂಬುದು ಆರೋಗ್ಯಕ್ಕಾಗಿ ಇರುವುದೆಂಬ ಭ್ರಮೆಯನ್ನು ಮಾತ್ರ ಹುಟ್ಟಿಸಿದೆ. ಅದು “Disease care” ಅಂದರೆ “ಅನಾರೋಗ್ಯದ ರಕ್ಷಕ” ಆಗಿರುವುದೇ ಹೊರತು “ಆರೋಗ್ಯ ರಕ್ಷಕವಾಗಿ ಇಲ್ಲದ ಪರಿಸ್ಥಿತಿ ಬಹುತೇಕ ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತದೆ ಎಂದು ಖ್ಯಾತ ವೈದ್ಯಚಿಂತಕನೊಬ್ಬ ಉಲ್ಲೇಖಿಸಿದ್ದಾರೆ. 1998ರ JAMA ಅಧ್ಯಯನದ ಪ್ರಕಾರ, ಸರಾಸರಿ 1,06,000 ವೈದ್ಯರ ಪ್ರಿಸ್ಕ್ರಿಪ್ಷನ್ ನ ಔಷಧಜನ್ಯ ಸಾವುಗಳು ಪ್ರತೀವರ್ಷ ಉಂಟಾಗುತ್ತದೆ. AHRQ ವರದಿಯ ಪ್ರಕಾರ ಅಲ್ಲಿ 1985ರಿಂದ 2004ರ ಅವಧಿಯಲ್ಲಿ ನಡೆಸಲಾದ 3 ಮಿಲಿಯ ಶಸ್ತ್ರಚಿಕಿತ್ಸೆಗಳಲ್ಲಿ, 1,12,994 ಸರ್ಜರಿಗಳಲ್ಲಿ ಒಂದು ಸರ್ಜರಿಗಳನ್ನು ತಪ್ಪು ಜಾಗದಲ್ಲಿ ನಡೆಸಲಾಗಿದೆ (ಒಂದು ಅಂಗದ ಬದಲಿಗೆ ಮತ್ತೊಂದು ಅಂಗದಲ್ಲಿ).
2004ರಲ್ಲಿ, ಅಲ್ಲಿನ ಸಮಿತಿಗೆ ಇಂತಹ ತಪ್ಪು ಸರ್ಜರಿಗಳನ್ನು ತಡೆಗಟ್ಟುವ ಸಲುವಾಗಿ ಕ್ರಮಗಳನ್ನು ರಚಿಸಲು ಶಸ್ತ್ರಚಿಕಿತ್ಸಕರನ್ನು ಆಹ್ವಾನಿಸಲಾಯಿತು. ತಪ್ಪು ಜಾಗ, ತಪ್ಪು ವಿಧಾನ, ತಪ್ಪಾದ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ತಡೆಯುವ ಬಗ್ಗೆ ಪ್ರಣಾಳಿಕೆ ತಯಾರಿಸಲು ಪ್ರಯತ್ನ ನಡೆಯಿತು. ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ದೇಹದಲ್ಲಿ ಶಸ್ತ್ರಚಿಕಿತ್ಸೆಯ ಭಾಗವನ್ನು ಸರಿಯಾಗಿ ಗುರುತು ಹಾಕಬೇಕಾಗುತ್ತದೆ. ಇದರ ನ್ಯೂನತೆಯಿಂದ ಯಾವುದೋ ಅಂಗದ ಬದಲಿಗೆ ಇನ್ಯಾವುದೋ ಅಂಗದ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ ರೋಗಿ ಜೀವನಪೂರ್ತಿ ನರಳುವಂತೆ ಆಗುತ್ತದೆ. ಪಿತ್ತಕೋಶದ ಕಲ್ಲಿಗೆ ಇತ್ತೀಚೆಗೆ ಸಾಫ್ಟ್ ವೇರ್ ನೌಕರಿಯಲ್ಲಿದ್ದ ಯುವಕನೊಬ್ಬ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಆರೋಗ್ಯ ವಿಮೆಯೂ ಆತನಿಗೆ ಇತ್ತು. ಆದರೆ ಶಸ್ತ್ರಚಿಕಿತ್ಸೆ ನಂತರ ಪಿತ್ತರಸದ ಸೋರುವಿಕೆ ಕಾರಣದಿಂದ ಆತ ಮೃತಪಟ್ಟಿದ್ದ. ಮೂರು ಗಂಟೆಯ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಬೆನ್ನುನೋವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಹೋಗಿ ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ರಕ್ತ ನಾಳವನ್ನು ಕತ್ತರಿಸಿದ್ದರು. ಈ ಸಂದರ್ಭದಲ್ಲಿ ರಕ್ತನಾಳವನ್ನು ಕತ್ತರಿಸಿದ್ದು ಗಮನಕ್ಕೆ ಬಾರದೇ ಆಂತರಿಕ ರಕ್ತಸ್ರಾವ ಉಂಟಾಗಿ ಶಾಶ್ವತವಾಗಿ ಇಹಲೋಕ ತ್ಯಜಿಸಿದ್ದಳು. ಇಂತಹ ಹಲವಾರು ಘಟನೆಗಳು ನಡೆಯುತ್ತಿರುವುದು ವೈದ್ಯಲೋಕದಲ್ಲಿ ವಿಪರ್ಯಾಸ.
ನ್ಯೂಯಾರ್ಕ್ ನಲ್ಲಿ ಒಂದು ಘಟನೆ ನಡೆದಿತ್ತು. ವೈದ್ಯ ಜಗತ್ತು ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗುವ ರೋಗಿಯ ಕಡೆಯವರು ಗಮನಗಲ್ಲಿಡಬೇಕಾದ ವಿಚಾರ. 35 ವರ್ಷದ ಮಹಿಳೆ ಅಪೆಂಡಿಕ್ಸ್ ಆಪರೇಶನ್ ಮಾಡಿಸಿಕೊಳ್ಳಲು ಅಲ್ಲಿನ ಆಸ್ಪತ್ರೆಗೆ ದಾಖಲಾಗುತ್ತಾಳೆ. ಶಸ್ತ್ರ ಚಿಕಿತ್ಸೆ ನಂತರ ಸುಗಮವಾಗಿ ಸುಧಾರಿಸುತ್ತಾಳೆ ಮತ್ತು ಆಸ್ಪತ್ರೆಯಿಂದ ವೈದ್ಯರು ಡಿಸ್ಚಾರ್ಚ್ ಮಾಡುತ್ತಾರೆ. ಶಸ್ತ್ರ ಚಿಕಿತ್ಸೆಯ ನಂತರದ 8ನೇ ದಿನಕ್ಕೆ ಆಕೆ ಮನೆಗೆ ಹೋಗುತ್ತಾಳೆ. ಮರುದಿನವೇ ತನಗೆ ತೀವ್ರ ಹೊಟ್ಟೆನೋವು ಇದೆಯೆಂದು ತನ್ನ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಫೋನ್ ಮಾಡುತ್ತಾಳೆ. ವೈದ್ಯರು ಔಷಧಗಳನ್ನು ಸೂಚಿಸಿ, ಆತಂಕ ಬೇಡ ಎನ್ನುತ್ತಾರೆ. ಆದರೆ ನೋವು ಕಡಿಮೆ ಆಗದಿದ್ದಾಗ, ಇನ್ನೊಬ್ಬ ವೈದ್ಯರ ಬಳಿ ಹೋಗುತ್ತಾಳೆ. ಆ ವೈದ್ಯರು ತೀವ್ರವಾದ ಕರುಳಿನಡಚಣೆ ಆಗಿದೆಯೆಂದು, ಇನ್ನೊಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ, ತುರ್ತು ಸಂದರ್ಭವೆಂದು, ಶಸ್ತ್ರ ಚಿಕಿತ್ಸೆ ನಡೆಸುತ್ತಾರೆ. ಆಗ ಮೊದಲು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ತೆಗೆಯದೇ ಬಾಕಿ ಉಳಿಸಿದ ಉಪಕರಣವೊಂದು (clamp) ಎರಡನೇ ವೈದ್ಯರ ಗಮನಕ್ಕೆ ಬರುತ್ತದೆ. ಕರುಳಿನ ಕೆಲವು ಭಾಗ ಆ ಉಪಕರಣದ ದೆಸೆಯಿಂದಾಗಿ ಸುರುಳಿಸುತ್ತಿಕೊಂಡಿದ್ದು, ಕರುಳಿನ ಆ ಭಾಗ ಕೊಳೆತುಹೋಗಿತ್ತು(ಗ್ಯಾಂಗ್ರೀನ್). ಈ ವೈದ್ಯರು ಆ ಕೊಳೆತಭಾಗವನ್ನು ಉಪಕರಣ ಸಮೇತ ತೆಗೆದು, ಆರೋಗ್ಯವಂತ ಕರುಳಿನ 2 ಭಾಗಗಳನ್ನು ಹೊಲಿಯುತ್ತಾರೆ. ಹೊಟ್ಟೆಯ ತೆರೆದ ಗಾಯಕ್ಕೂ ಹೊಲಿಗೆ ಹಾಕಿ ಶಸ್ತ್ರ ಚಿಕಿತ್ಸೆ ಮುಗಿಸುತ್ತಾರೆ. ಆದರೆ, ಶಸ್ತ್ರ ಚಿಕಿತ್ಸೆಯ ನಂತರ ಆ ಗಾಯ ಗುಣವಾಗುವುದೇ ಇಲ್ಲ. ಜ್ವರ ಕೂಡ ಬರುತ್ತದೆ. ವೈದ್ಯರು ಇದನ್ನು ಹೊಟ್ಟೆ ಒಳಪೊರೆಯ ಉರಿಯೂತ (peritonitis) ಎಂದು ಗುರುತಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಪವಾಡ ಉಂಟು ಮಾಡಬಹುದಾದ ಯಾವ ಔಷಧಗಳೂ ಕೂಡ ಪ್ರಯೋಜನಕ್ಕೆ ಬರಲೇ ಇಲ್ಲ. ಎರಡನೇ ದಿನದಲ್ಲಿ ಆಕೆ ಸತ್ತು ಯಮಲೋಕ ಸೇರುತ್ತಾಳೆ. ಶವದ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ವೈದ್ಯಕೀಯ ಅಧೀಕ್ಷಕರು ಅದನ್ನು “ಉದರಪೊರೆಯ ಉರಿಯೂತ (septic peritonitis) ಪರಕೀಯ ವಸ್ತುವಿನ ಕಾರಣದಿಂದ ” ಎಂದು ದಾಖಲಿಸುತ್ತಾರೆ. ಎರಡನೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಎರಡನೇಯ ವೈದ್ಯರು ಆಕೆಯ ಹೊಟ್ಟೆಯಲ್ಲಿ ಸರ್ಜಿಕಲ್ Gauge ಪ್ಯಾಡ್ ಒಂದನ್ನು ಉಳಿಸಿದ್ದರು! ಮೊದಲ ವೈದ್ಯರು ಬಿಟ್ಟ ಕ್ಲಾಂಪ್ ತೆಗೆಯುವ ಎರಡನೇಯ ವೈದ್ಯರು ಇದೊಂದು ಎಡವಟ್ಟು ಮಾಡಿದ್ದರು, ತಮಗೆ ಅರಿವಿಲ್ಲದೆಯೇ! ಸರ್ಜರಿಯ ನಂತರ ಈ ರೀತಿ ದೇಹದ ಒಳಗೆ ಬಾಕಿಯಾದ ವಸ್ತುಗಳನ್ನು ಹೊತ್ತುಕೊಂಡು ವೈದ್ಯರ ಬಳಿಗೆ ಆ ರೋಗಿ ಮರಳಿಬರಲು ಕೆಲವು ಸಲ ಅನೇಕ ತಿಂಗಳುಗಳೇ ಹಿಡಿಯಬಹುದು. ಆ ವಸ್ತು ಸೂಕ್ಷ್ಮಾಣು ಸೋಂಕಿಗೆ ತುತ್ತಾಗುವಂತೆ ಮಾಡಿ, ದೇಹದ ಯಾವುದಾದರೂ ಕಾರ್ಯಕ್ಕೆ ತೊಂದರೆಯಾಗಿ ನೋವು ಕಾಣಿಸಿಕೊಂಡಾಗ ಮಾತ್ರ ರೋಗಿ ಜಾಗೃತನಾಗುತ್ತಾನೆ. ಹೆಚ್ಚಾಗಿ X-Ray ಮಾಡಿದಾಗ ಏನೋ ಇದೆಯೆಂದು ಗಮನಕ್ಕೆ ಬರುತ್ತದೆ. ಸರ್ಜನ್ ಬಳಿ ಬಂದರೆ ಅವರು ಆಸ್ಪತ್ರೆಯ ಸಹಾಯಕ ದಾದಿಯರನ್ನು ದೂರುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ದಾದಿಯರು ಉಪಕರಣ ಮತ್ತು ಪ್ಯಾಡ್ಗಳ ಸಂಖ್ಯೆಯನ್ನು ಎಣಿಸುವಲ್ಲಿ ತಪ್ಪೆಸಗಿದ್ದಾರೆಂದು ನುಣುಚಿಕೊಳ್ಳುತ್ತಾರೆ. ದಾದಿಯರು ತಂಡದ ಮುಖ್ಯಸ್ಥರಾದ ವೈದ್ಯರು ಸರಿಯಾಗಿ ನಿರ್ದೇಶನ ನೀಡಿಲ್ಲ ಎಂದು ಆರೊಪಿಸುತ್ತಾರೆ! ಆಸ್ಪತ್ರೆಗಳು, ಗಾಯದ ಮೇಲೆ ಉಪ್ಪು ಹಾಕಿದಂತೆ, ರೋಗಿಯ ನೋವಿಗೆ ಮತ್ತೊಂದು ಸೇರ್ಪಡೆಯೆಂಬಂತೆ ರೋಗಿಯೇ ಏನಾದರೂ ತಪ್ಪೆಸಗಿದಂತೆ ಆಡುತ್ತಾರೆ.
ಶಸ್ತ್ರವೈದ್ಯರು ಆಪ್ತರೆಂದೋ, ಪರಿಚಿತರೆಂದೋ, ಪರಿಚಯದವರು ಸೂಚಿಸಿದರೆಂದೋ, ಯಾವುದೋ ಒಂದು ಸಂದರ್ಭದಲ್ಲಿ ಅವರಿಂದ ನಾವು ಉಪಕೃತರೆಂದೋ, ಶಸ್ತ್ರವೈದ್ಯರನ್ನು ಆಯ್ಕೆ ಮಾಡಬೇಡಿ. ಅವರ ಅನುಭವ, ಪ್ರಾವೀಣ್ಯತೆ, ನಿಮಗೆ ಮಾಡಬೇಕಾದ ಶಸ್ತ್ರಚಿಕಿತ್ಸೆಗಳನ್ನು ಅವರು ಎಷ್ಟು ಮಂದಿಗೆ ಯಶಸ್ವಿಯಾಗಿ ಮಾಡಿದ್ದಾರೆ ಎಂಬುದರ ಮೇಲಿಂದ ಶಸ್ತ್ರವೈದ್ಯರನ್ನು ನಿರ್ಧರಿಸಿ. ನುರಿತ ನರ್ಸಿಂಗ್ ಸಿಬ್ಬಂದಿ, ಸುಸಜ್ಜಿತ ಆಪರೇಷನ್ ಥಿಯೇಟರ್, ಅನೆಸ್ತೇಸಿಯಾ ವೈದ್ಯರ ನಿರಂತರ ಉಪಸ್ಥಿತಿ ಇರುವ ತುರ್ತು ಚಿಕಿತ್ಸಾ ಘಟಕ ಎಲ್ಲವೂ ಪ್ರಮುಖವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅದೇ ಮಟ್ಟದ ಶಿಕ್ಷಣ ಪಡೆದ ಎರಡನೆಯ ಹಾಗೂ ಮೂರನೆಯ ವೈದ್ಯರ ಸಲಹೆ, ಅಭಿಪ್ರಾಯ ಕೂಡಾ ಪಡೆಯಿರಿ. ಒಮ್ಮೆ ವೈದ್ಯ ಪದವಿ ಮುಗಿಸಿದ ನಂತರ “ಡಿಗ್ರಿ” ಮತ್ತು “ಬೋರ್ಡು”ಗಳು ಆತ “ಜಸ್ಟ್ ಪಾಸ್” ಡಾಕ್ಟರ್, “ಡಿಸ್ಟಿಂಕ್ಷನ್” ಪಡೆದ ಡಾಕ್ಟರ್ ಎಂಬುದರ ಬಗ್ಗೆ ಮಾತನಾಡಲಾರವು. ಶಸ್ತ್ರವೈದ್ಯನ ಕೌಶಲ್ಯದ ಬಗೆಗೂ ಏನೂ ಹೇಳಲಾರವು.
ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ (ಬಿ.ಎ.ಎಂ.ಎಸ್, ಎಂ.ಎಸ್. (ಆಯು)
ಆಯುರ್ವೇದ ತಜ್ಞರು ಹಾಗೂ ಆಡಳಿತ ನಿರ್ದೇಶಕರು,ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು ಗ್ರಾಮಪಂಚಾಯತ್ ಸಮೀಪ, ಕಾಣಿಯೂರು-ಸುಬ್ರಮಣ್ಯ ರಾಜ್ಯ ಹೆದ್ದಾರಿ, ಪಾದೆ, ನರಿಮೊಗರು, ಪುತ್ತೂರು ಮೊಬೈಲ್: 9740545979