ನ್ಯೂಸ್ ನಾಟೌಟ್: ವಿದ್ಯಾರ್ಥಿಗಳಲ್ಲಿ ತಾಳ್ಮೆ, ನೈತಿಕ ಮೌಲ್ಯಗಳು ಇದ್ದಷ್ಟು ಸಾಧಿಸುವ ಶಕ್ತಿ ಹೆಚ್ಚುತ್ತದೆ. ಜೀವನದ ಅನುಭವಗಳನ್ನು ಯಶಸ್ಸನ್ನು ಗಳಿಸಲು ಮಾರ್ಗದರ್ಶಿಯಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಕ, ಚಿಂತಕ, ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಅರವಿಂದ ಚೊಕ್ಕಾಡಿ ಹೇಳಿದರು.
ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶುಕ್ರವಾರ (ಮೇ 31) ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಕಾಲೇಜು ಮತ್ತು ಉಪನ್ಯಾಸಕರ ಪಾತ್ರ ಹಿರಿದು. ಜೀವನದಲ್ಲಿ ಸತ್ಯ ನಿಷ್ಠೆ ಇದ್ದರಷ್ಟೇ ಯಶಸ್ಸು ಗಳಿಸಲು ಸಾಧ್ಯ. ಶೈಕ್ಷಣಿಕ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಹಾರೈಸಿದರು. ಎನ್ನೆಂಸಿ ಯಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸಿ ಎನ್ನೆಂಸಿ ಜಗತ್ತಿನ ಅತ್ಯುತ್ತಮ ಕಾಲೇಜು ಎಂದು ಹೆಮ್ಮೆಯಿಂದ ನುಡಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಅಧ್ಯಕ್ಷರಾಗಿರುವ ಡಾ. ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಪೂಜ್ಯರು ಹಾಗೂ ಸ್ಥಾಪಕಾಧ್ಯಕ್ಷರಾದ ಕೆ.ವಿ. ವೆಂಕಟರಮಣ ಗೌಡ ಅವರ ಸೇವೆಯನ್ನು ಸ್ಮರಿಸಿದರು. ಸಂಸ್ಥೆ ನೀಡುತ್ತಿರುವ ಅತ್ಯುತ್ತಮ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶಪಾಲ ಪ್ರೊ. ರುದ್ರಕುಮಾರ್ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ, ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಧನಂಜಯ ಮದುವೆಗದ್ದೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ. ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಿನ್ನಪ್ಪ ಗೌಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದುಕೊಂಡು ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಕೆ., ಕಾಲೇಜು ಎನ್ ಎಸ್ ಎಸ್ ಘಟಕವನ್ನು ಸತತ 26 ವರ್ಷಗಳಿಂದ ಮುನ್ನಡೆಸಿದ ಸಂಜೀವ ಕುದ್ಪಾಜೆ ಹಾಗೂ ಕಬಡ್ಡಿಯಲ್ಲಿ ಕೆವಿಜಿ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಬೆಸ್ಟ್ ರೈಡರ್ ಆಗಿದ್ದು ಪ್ರೊ ಕಬಡ್ಡಿಯ ತೆಲುಗು ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿ ರತನ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು, ಕಾಲೇಜಿನ ವಿವಿಧ ಸಂಘಗಳಿಂದ ಆಯೋಜಿಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋಸ್ಬಿನ್ ಬಾಬು ಸ್ವಾಗತಿಸಿ, ಸಹ ಕಾರ್ಯದರ್ಶಿ ಯಶಿಕಾ ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಕೃಷ್ಣರಾಜ್ ಸಂದೇಶ ವಾಚಿಸಿದರು. ಉಪಾಧ್ಯಕ್ಷೆ ನಿರೀಕ್ಷಾ ವಂದಿಸಿದರು. ಕೆವಿಜಿ ಷಷ್ಯಬ್ಧ ರಂಗಮಂದಿರದ ವೇದಿಕೆಯಲ್ಲಿ ವಿಶೇಷವಾಗಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರಾ ಎಂ ಆರ್, ಸಾಂಸ್ಕೃತಿಕ ಕಾರ್ಯದರ್ಶಿ ಕುಸುಮಾಧರ ಎ ಟಿ, ಸದಸ್ಯರಾದ ಮಂಜುಶ್ರೀ, ಹರ್ಷಿತ್ ಮರ್ಕಂಜ, ಜಯಪ್ರಕಾಶ್ ಪೆರುಮುಂಡ, ಹೇಮಂತ್ ನಾರ್ಕೋಡು ತಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಗೊಂಡವು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.