ಮಡಿಕೇರಿ: ವಿರಾಜಪೇಟೆ ತಾಲೂಕಿನ ೧ನೇ ರುದ್ರಗುಪ್ಪೆ ಎಂಬಲ್ಲಿ ತೋಟದ ಕಾರ್ಮಿಕನೊಬ್ಬನನ್ನು ಹುಲಿ ದಾಳಿ ನಡೆಸಿ ಕೊಂಡು ಹಾಕಿದೆ. ಅಕ್ಷರಶಃ ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಎರವರ ಗಣೇಶ್ (29) ಎಂದು ಗುರುತಿಸಲಾಗಿದೆ.
ಕೊಂಗಂಡ ಅಯ್ಯಪ್ಪ ಅವರ ತೋಟದಲ್ಲಿ ಗಣೇಶ್ ಅವರು ಕರಿಮೆಣಸು ಕೀಳುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದಾಗ ಇಂದು ಸಂಜೆ 4 ಗಂಟೆಗೆ ಏಕಾಏಕಿ ಹುಲಿ ದಾಳಿ ಮಾಡಿದೆ. ನೇರವಾಗಿ ತಲೆಗೆ ಕಚ್ಚಿರುವುದರಿಂದ ಗಣೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಇದೇ ವೇಳೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.