ನ್ಯೂಸ್ ನಾಟೌಟ್: ಕೆಲವು ಸಲ ಕಷ್ಟದಲ್ಲಿ ಇರುವವರಿಗೆ ನಾವು ಉಪಕಾರ ಮಾಡೋಕೆ ಹೋಗಿ ಉಪದ್ರದಲ್ಲಿ ಸಿಕ್ಕಿಬೀಳೋದೇ ಹೆಚ್ಚು. ಈಗಿನ ಕಾಲದಲ್ಲಿ ಅಯ್ಯೋ ಪಾಪ ಅಂದ್ರೆ ಅಂದವನಿಗೇ ಶಾಪ ತಟ್ಟುವಷ್ಟರ ಮಟ್ಟಿಗೆ ನಮ್ಮ ವ್ಯವಸ್ಥೆ ಕೆಟ್ಟಿದೆ. ಇಂತಹ ಸಮಯದಲ್ಲಿ ಗ್ರಾಹಕರೊಬ್ಬರು ತನಗೆ ಅನ್ಯಾಯವಾಗಿದೆ ಎಂದು ಏಕಾಂಗಿಯಾಗಿ ಬ್ಯಾಂಕ್ ಒಳಗಡೆಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೆನರಾ ಬ್ಯಾಂಕ್ ಒಳಗೆ ಗ್ರಾಹಕ ಒಂಟಿಯಾಗಿ ಮೌನ ಪ್ರತಿಭಟನೆಗೆ ಶರಣಾಗಿದ್ದಾರೆ. ಈ ಅಪರೂಪದ ಘಟನೆ ಇಂದು (ಜೂ.1) ನಡೆದಿದೆ.
ಹೆಸರು ಜಾನಿ ಕೆ.ಪಿ, ಕಾರ್ಮಿಕ ಸಂಘಟನೆಯ ಮುಂಚೂಣಿ ನಾಯಕ. ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಜನಪರ ಧ್ವನಿಯಾಗಿದ್ದವರು. ಸಮಾಜ ಮುಖಿಯಾಗಿರುವ ಅವರು 2016ರಲ್ಲಿ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಸಾಲಕ್ಕೆ ಜಾಮೀನು ಸಹಿ ಮಾಡಿದ್ದರು. ಆಕೆಯ ವಿದ್ಯೆ ಪೂರ್ಣಗೊಂಡಿತು. ಆದರೆ ಕೆನರಾ ಬ್ಯಾಂಕ್ ನಲ್ಲಿ ಮಾಡಿದ ಸಾಲ (60,000) ಮಾತ್ರ ಪೂರ್ಣಗೊಂಡಿರಲಿಲ್ಲ.
ಸಾಲ ಕಟ್ಟಲು ಆಗದಿರುವುದರಿಂದ ಮೇಲಿಂದ ಮೇಲೆ ವಿದ್ಯಾರ್ಥಿನಿಯ ಮನೆಗೆ ನೋಟಿಸ್ ಬಂತು, ಕೊನೆಗೆ ವನ್ ಟೈಮ್ ಸೆಟ್ಲ್ ಮೆಂಟ್ ಅಂತ ಆಯ್ಕೆ ಬಂದಾಗ ಅವರು ರಿಯಾಯಿತಿ ದರದಲ್ಲಿ ಸಾಲ ಕಟ್ಟಿದ್ರು. ಈ ವಿಚಾರ ಜಾಮೀನು ನೀಡಿದ ಕೆ.ಪಿ ಜಾನಿ ಅವರಿಗೆ ಕಳೆದೊಂದು ತಿಂಗಳ ತನಕ ಗೊತ್ತೇ ಇರಲಿಲ್ಲ. ಇತ್ತೀಚೆಗೆ ತನ್ನ ಕೆಲಸದ ನಿಮಿತ್ತ ಬ್ಯಾಂಕ್ ಗೆ ಹೋದಾಗ ನೀವು ಈ ಸೌಲಭ್ಯಕ್ಕೆ ಎಲಿಜಿಬಲ್ ಅಲ್ಲ ಅನ್ನುವ ಮಾಹಿತಿ ಬ್ಯಾಂಕ್ ಅಧಿಕಾರಿಗಳಿಂದ ಸಿಕ್ಕಿತು.
ಇದರಿಂದ ಅಸಮಾಧಾನಗೊಂಡ ಕೆಪಿ ಜಾನಿ ಕಾರಣ ಕೇಳಿದ್ದಾರೆ. ಆಗ ನೀವು ಸಾಲಕ್ಕೆ ಜಾಮೀನು ಸಹಿ ಮಾಡಿದ್ದೀರಿ. ಅವರು ವನ್ ಟೈಮ್ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಹೀಗಾಗಿ ನಿಮ್ಮ ‘ಸಿಬಿಲ್’ ಡೌನ್ ಆಗಿದೆ. ನಿಮಗೆ ಬ್ಯಾಂಕ್ ನಿಂದ ಕೇಳಿರುವ ಸೌಲಭ್ಯ ಸಿಗುವುದಿಲ್ಲ ಎನ್ನುವ ಉತ್ತರ ಬಂದಿದೆ. ಹಾಗಾದರೆ ವನ್ ಟೈಮ್ ಸೆಟ್ಲ್ ಮೆಂಟ್ ಮಾಡುವಾಗ ಜಾಮೀನುದಾರನಾಗಿರುವ ನನ್ನನ್ನು ಏಕೆ ಕರೆಯಲಿಲ್ಲ..? ಎಂದು ಜಾನಿ ಪ್ರಶ್ನಿಸಿದ್ದಾರೆ. ನಾನು ಮಾಡದ ತಪ್ಪಿಗೆ ಸಿಬಿಲ್ ಡೌನ್ ಆಗಿದೆ. ಇದಕ್ಕೆ ಕಾರಣ ಬ್ಯಾಂಕ್ ಸಿಬ್ಬಂದಿ, ನೀವು ನನ್ನನ್ನು ವನ್ ಟೈಮ್ ಸೆಟ್ಲ್ ಮೆಂಟ್ ಗೆ ಕರೆದಿಲ್ಲ ಎಂದು ಲೆಟರ್ ಕೊಡಿ ಎಂದು ಕೇಳಿದ್ದಾರೆ.
ಇದನ್ನು ಪುರಸ್ಕರಿಸದೇ ಇದ್ದಾಗ, ರಿಜಿಸ್ಟ್ರರ್ ಲೆಟರ್ ಮೂಲಕ ಕೂಡ ಮತ್ತೆ ಮನವಿ ಮಾಡಿದ್ದಾರೆ. ಕಳೆದೊಂದು ತಿಂಗಳಿನಿಂದ ಲೆಟರ್ ಕೇಳಿದರೂ ಇದುವರೆಗೂ ಬ್ಯಾಂಕ್ ನಿಂದ ಸಿಕ್ಕಿಲ್ಲ. ಹೀಗಾಗಿ ಸಿಟ್ಟಿಗೆದ್ದ ಜಾನಿ ಅವರು ಇದೀಗ ಕೆನರಾ ಬ್ಯಾಂಕ್ ನ ಒಳಗಡೆ ಮೌನ ಪ್ರತಿಭಟನೆಗೆ ಶರಣಾಗಿದ್ದಾರೆ.