ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 2024-25ನೇ ಸಾಲಿನ ಸ್ಟೂಡೆಂಟ್ ಕೌನ್ಸಿಲ್ (STUDENT COUNCIL) ಉದ್ಘಾಟನೆ ಮತ್ತು ಕಾಲೇಜು ಪ್ರಾರಂಭೋತ್ಸವ (Freshers day-AAGAMAN-24) ಕಾರ್ಯಕ್ರಮ ಶುಕ್ರವಾರ (ಮೇ 31) ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ವಿದ್ಯಾರ್ಥಿ ಸಮಿತಿ ನಾಯಕತ್ವ ರೂಪಿಸಲು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಆಡಳಿತ ವ್ಯವಸ್ಥೆಯ ನಡುವೆ ಕೊಂಡಿಯಾಗಿ ಪ್ರಮುಖ ಪಾತ್ರ ವಹಿಸಲಿದೆ. ಸ್ಟೂಡೆಂಟ್ ಕೌನ್ಸಿಲ್ ನ ನಾಯಕರು ತಮ್ಮ ಜವಾಬ್ದಾರಿ ಅರಿತು ವಿದ್ಯಾರ್ಥಿಗಳ ಧ್ವನಿಯಾಗಿ ಮತ್ತು ಸಂಸ್ಥೆಯ ಗೌರವವನ್ನು ಎತ್ತಿಹಿಡಿಯಬೇಕು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ನೀಡಿ ಗೌರವಿಸಿದರು.
ನೂತನ ವಿದ್ಯಾರ್ಥಿ ಸಮಿತಿ ಸದಸ್ಯರಿಗೆ ಕೆವಿಜಿ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಗೀತಾ ದೊಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಡಾ. ದಿನೇಶ್ ಪಿ.ವಿ., ನೇತ್ರವಿಜ್ಞಾನ ವಿಭಾಗದ ಪ್ರೊಫೆಸರ್ ಡಾ. ರಮೇಶ್ ಬಾಬು, ಪ್ರೊಫೆಸರ್ ಮತ್ತು ಇಎನ್ಟಿ ಯ ಎಚ್ಒಡಿ ಡಾ. ರವಿಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಶೀಲಾ ಜಿ. ನಾಯಕ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ರವಿಶಂಕರ್ ಸ್ವಾಗತಿಸಿದರು. ಡಾ. ಶ್ರೀವಸ್ತ ಮತ್ತು ಡಾ.ಜಾಸ್ಮಿ ವಂದಿಸಿದರು. ಬಳಿಕ ವೈದ್ಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.