ನ್ಯೂಸ್ ನಾಟೌಟ್: ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಮುರುಘಾಶ್ರೀ ಮೇಲೆ ದಾಖಲಾಗಿರುವ ಫೋಕ್ಸೋ ಪ್ರಕರಣಕ್ಕೆ ಮೇ.೨೮ ರಂದು ಮತ್ತಷ್ಟು ಕಗ್ಗಂಟಾಗಿದೆ. ಸ್ವಾಮೀಜಿ ಕಿರುಕುಳ ನೀಡಿದ್ದರೆನ್ನಲಾದ ಸಂತ್ರಸ್ತೆ ಮತ್ತೊಂದು ಆರೋಪ ಮಾಡಿದ್ದು, ನನ್ನ ಚಿಕ್ಕಪ್ಪ ನನಗೆ ಹಾಗೂ ನನ್ನ ತಮ್ಮನಿಗೆ ಕಿರುಕುಳ ನೀಡುತ್ತಿದ್ದಾರೆಂದು ಪ್ರಕರಣದ ಸಂತ್ರಸ್ತೆ ಮಕ್ಕಳ ಕಲ್ಯಾಣ ಸಮಿತಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಮೇ 24 ರಂದು ಮಹಿಳಾ ಠಾಣೆಗೆ ಸಂತ್ರಸ್ತೆ ಚಿಕ್ಕಪ್ಪ ದೂರು ನೀಡಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳೆಂಬ ಸಂಗತಿ ಪೊಲೀಸರ ಗಮನಕ್ಕೆ ತಂದಿದ್ದರು. ಮಂಗಳವಾರ ಸಂಜೆ ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವ ಮೂಲಕ ಪ್ರಕರಣಕ್ಕೆ ತಿರುವು ನೀಡಿದ್ದಾಳೆ. ಮೇ 24 ರಂದು ಚಿತ್ರದುರ್ಗದ ನಿವಾಸದಿಂದ ನಾಪತ್ತೆಯಾದ ಸಂತ್ರಸ್ತೆ ನೇರವಾಗಿ ಮೈಸೂರಿನ ಒಡನಾಡಿ ಸಂಸ್ಥೆಗೆ ಹೋಗಿ ಚಿಕ್ಕಪ್ಪನ ಕಿರುಕುಳದ ವಿಚಾರ ತಿಳಿಸಿದ್ದಾಳೆ ಎನ್ನಲಾಗಿದೆ.
ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆಯನ್ನು ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಿಡಬ್ಲ್ಯುಸಿ ಸೂಚನೆ ಅನ್ವಯ ಎರಡ್ಮೂರು ದಿನ ತಮ್ಮ ಬಳಿಯೇ ಇಟ್ಟುಕೊಂಡು ನಂತರ ಮಂಗಳವಾರ ನೇರವಾಗಿ ಚಿತ್ರದುರ್ಗಕ್ಕೆ ಕರೆತಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಸಂತ್ರಸ್ತೆ ತನ್ನ ಚಿಕ್ಕಪ್ಪನ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾಳೆ. ಆರೋಪಿ ಮುರುಘಾಶ್ರೀ ಬೆಂಬಲಿಗರು ನಮ್ಮ ಚಿಕ್ಕಪ್ಪಗೆ ಆಮಿಷವೊಡ್ಡಿ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾನೆ. ನನ್ನ ಸಹೋದರ ಕೂಡಾ ಕಿರುಕುಳ ಅನುಭವಿಸುತ್ತಿದ್ದಾನೆಂದು ದೂರಿದ್ದಾಳೆ ಎಂದರು. ಈ ಬಗ್ಗೆಯೂ ಪೊಲೀಸರು ಮತ್ತೆ ಕೋರ್ಟ್ ಅನುಮತಿ ಪಡೆದು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.
Click 👇