ಬೆಂಗಳೂರು: ದೇಶಾದ್ಯಂತ ಇಂದು ಮತ್ತು ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಪಾಲ್ಗೊಂಡಿದ್ದಾರೆ.
ದೇಶದ ಅತಿದೊಡ್ಡ ಬ್ಯಾಂಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಬ್ಯಾಂಕ್ ಗಳ ಖಾಸಗೀಕರಣ ನಿಲ್ಲಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬ್ಯಾಂಕ್ಗಳ ನೌಕರರು ಒತ್ತಾಯಿಸುತ್ತಿದ್ದಾರೆ. ಇತರ ಸಂಘಟನೆಗಳೂ ಮುಷ್ಕರ ಕರೆಗೆ ಓಗೊಟ್ಟಿದ್ದು ಸರಕಾರ ಖಾಸಗೀಕರಣವನ್ನು ನಿಲ್ಲಿಸಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು ಮತ್ತು ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿವೆ.
ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಎಸ್ಮಾ ಬೆದರಿಕೆಯ ನಡುವೆಯೂ ರಸ್ತೆ ಸಾರಿಗೆ ನೌಕರರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಹಣಕಾಸು ವಲಯಗಳು ಮುಷ್ಕರಕ್ಕೆ ಸೇರುತ್ತಿವೆ ಎಂದು ಅದು ಹೇಳಿದೆ.