ನ್ಯೂಸ್ ನಾಟೌಟ್: ಈ ಹೂವು ನೋಡೋಕೆ ತುಂಬಾನೆ ಸುಂದರವಾಗಿರುತ್ತೆ. ಕೆಂಪು, ಹಳದಿ, ಬಿಳಿ ಬಣ್ಣದಿಂದ ದೇವರ ಕುತ್ತಿಗೆಯಲ್ಲೂ ರಾರಾಜಿಸುತ್ತಿರುತ್ತದೆ. ಎಷ್ಟೋ ಸಲ ನಿಮಗೆ ದೇವಸ್ಥಾನಕ್ಕೆ ಹೋದಾಗ ಪ್ರಸಾದ ರೂಪದಲ್ಲಿಯೂ ಸಿಕ್ಕಿರಬಹುದು. ಹೌದು, ಇವತ್ತು ನಾನು ಹೇಳೋಕೆ ಹೊರಟಿರುವುದು ಕಣಗಿಲೆ ಹೂವಿನ ಬಗ್ಗೆ. ಈ ಹೂವು ನೋಡೋಕೆ ಎಷ್ಟು ಚೆಂದವಿದೆಯೋ ಅಷ್ಟೇ ಅಪಾಯಕಾರಿ.
ಈ ವಿಚಾರ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇದೀಗ ಈ ಹೂವಿನ ಬಗ್ಗೆಯೇ ಎಲ್ಲ ಕಡೆಯೂ ಚರ್ಚೆ ಶುರುವಾಗಿದೆ. ಹೀಗಾಗಿ ಈ ಮಾಹಿತಿಯನ್ನು ನಿಮ್ಮ ಮುಂದೆ ಇಡುವುದಕ್ಕೆ ಇಷ್ಟಪಡುತ್ತಿದ್ದೇನೆ. ಈ ಹೂವು ಇದೀಗ ಹೂವಿನಷ್ಟೇ ಸುಂದರವಾಗಿದ್ದ ಯುವತಿಯ ಪ್ರಾಣವನ್ನೇ ಬಲಿ ತೆಗೆದು ಬಿಟ್ಟಿದೆ. ಈ ಬೆನ್ನಲ್ಲೇ ಕೇರಳ ಸರ್ಕಾರ ಈ ಹೂವನ್ನೇ ತನ್ನ ರಾಜ್ಯದಲ್ಲಿ ಬ್ಯಾನ್ ಮಾಡಿದೆ.
ಹಾಗಾದರೆ ಹುಡುಗಿಯ ಸಾವಿಗೆ ಈ ಹೂವು ಹೇಗೆ ಕಾರಣವಾಯಿತು..? ಅನ್ನೋದನ್ನ ನಾವು ತಿಳಿದುಕೊಳ್ಳಲೇಬೇಕು. ಆಕೆ ವೃತ್ತಿ ನಿರತ ನರ್ಸ್. ಹೆಸರು ಸೂರ್ಯ ಸುರೇಂದ್ರನ್ ( 24 ವರ್ಷ). ಮೂಲತಃ ಕೇರಳದವರು. ಉದ್ಯೋಗ ಮಾಡುತ್ತಿದ್ದದ್ದು ದೂರದ ಇಂಗ್ಲೆಂಡ್ ನಲ್ಲಿ. ರಜೆಯ ಹಿನ್ನೆಲೆಯಲ್ಲಿ ಆಕೆ ತನ್ನ ಹುಟ್ಟೂರಿಗೆ ಬಂದಿದ್ದಳು. ಕುಟುಂಬದವರೊಂದಿಗೆ ಖುಷಿಯಲ್ಲಿ ಕಳೆದ ಆಕೆ ಕೇರಳದ ಹರಿಪತ್ ನಲ್ಲಿರುವ ತನ್ನ ಊರಿನಿಂದ ರಜೆ ಮುಗಿಸಿ ವಾಪಸ್ ಯುಕೆಗೆ ಹೋಗುವುದಕ್ಕೆ ತಯಾರಾದಳು. ಆಗ ಒಂದು ಫೋನ್ ಕರೆ ಬರುತ್ತೆ. ಏರ್ ಪೋರ್ಟ್ ಗೆ ಹೊರಡುವ ಮೊದಲು ಆಕೆ ಮನೆಯ ಹತ್ತಿರ ಫೋನ್ ನಲ್ಲಿ ಮಾತನಾಡುತ್ತ ಕಣಗಿಲೆ ಹೂವನ್ನು ಕಿತ್ತು ತಿನ್ನುತ್ತಾಳೆ. ಬಳಿಕ ಆಕೆ ನೆಡುಂಬಚೇರಿಯ ವಿಮಾನ ನಿಲ್ದಾಣಕ್ಕೆ ಹೊರಡುತ್ತಾಳೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಆಕೆಗೆ ವಿಪರೀತ ಎದೆನೋವು ಶುರುವಾಗಿದೆ. ವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗುತ್ತೆ. ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಖಚಿತಪಡಿಸುತ್ತಾರೆ.. ಕಣಗಿಲೆ ಹೂವಿನ ಸೇವನೆಯಿಂದಲೇ ಸಾವನ್ನಪ್ಪಿದ್ದಾಳೆ ಅನ್ನುವ ಆಘಾತಕಾರಿ ವಿಚಾರ ಹೊರಬಿದ್ದಿದೆ. ಈ ಬೆನ್ನಲ್ಲೇ ಕೇರಳ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ದೇವಸ್ಥಾನಗಳಲ್ಲಿ ಈ ಹೂವನ್ನು ಪ್ರಸಾದ ರೂಪದಲ್ಲಿ ಕೊಡಬಾರದು ಎಂದು ಪ್ರಕಟಣೆ ಹೊರಡಿಸಿದೆ.
ಈ ಕಣಗಿಲೆ ಹೂ, ಅದರ ಎಲೆ ಅತ್ಯಂತ ವಿಷಕಾರಿ, ಈ ಹೂವನ್ನು ಮನೆಯಲ್ಲಿ ಅಲಂಕಾರಿಕವಾಗಿ ಹಾಗೂ ದೇವರ ಪೂಜೆಗೆ ಬಳಸ್ತಾರೆ. ದೇವಸ್ಥಾನ, ಉದ್ಯಾನವನ, ರಸ್ತೆ ಬದಿ, ಕರೆ ಕಟ್ಟೆಗಳಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸಿರುತ್ತಾರೆ. ನಿಮ್ಮಲ್ಲಿ ಎಷ್ಟೋ ಜನರ ಮನೆಯಲ್ಲಿ ಈ ಹೂವು ಇರಬಹುದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನವರ ಮನೆಯಲ್ಲಿ ಈ ಸಸ್ಯ ಇದ್ದರೂ ಇದರ ಅಪಾಯದ ಬಗ್ಗೆ ಯಾರಿಗೂ ಗೊತ್ತಿಲ್ಲ.
ಈ ಹೂವನ್ನು ಕಸ್ತೂರಿ ಪಟ್ಟಿ, ಕಣಗಿಲೆ, ಕುದುರೆ ವಿಷದ ಗಿಡ ಎಂದೂ ಕರೆಯುತ್ತಾರೆ. ಈ ಹೂವಿನ ವಿಷವು ನೇರವಾಗಿ ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಇದೆಲ್ಲದರ ಹೊರತಾಗಿಯೂ ಈ ಹೂವನ್ನು ಔಷಧಿಗಾಗಿಯೂ ಬಳಸುತ್ತಾರೆ ಅನ್ನೋದೆ ವಿಶೇಷ. ಅಸ್ತಮಾ, ಕ್ಯಾನ್ಸರ್, ಮುಟ್ಟಿನ ಸಮಸ್ಯೆ, ಮಲೇರಿಯಾ, ರಿಂಗ್ ವರ್ಮ್ ಸೇರಿದಂತೆ ಹಲವು ಕಾಯಿಲೆಗಳ ಮೆಡಿಸಿನ್ ಗಳಲ್ಲಿ ಇದನ್ನು ಬಳಸಲಾಗುತ್ತದೆ. ಮನೆಯಲ್ಲಿ ಅಲಂಕಾರಿಕವಾಗಿ ಇಟ್ಟರೆ ವಾಸ್ತು ಪ್ರಕಾರವಾಗಿ ಶುಭವಾಗುತ್ತದೆ ಅನ್ನುವ ನಂಬಿಕೆಯೂ ಇದೆ. ಇದನ್ನು ಇಂಗ್ಲಿಷ್ ನಲ್ಲಿ ನೆರಿಯುಂ ಒಲಿಯಾಂಡರ್ ಎಂದು ಕರೆಯುತ್ತಾರೆ.
ಉದ್ದದ ಎಲೆ, ಬಣ್ಣ..ಬಣ್ಣದ ಕಲರ್ ಗಳಲ್ಲಿ ಈ ಹೂವು ನೋಡುಗರ ಕಣ್ಮನ ಸೆಳೆಯುತ್ತದೆ. ಏನೇ ಆಗಲಿ ಈ ಹೂವು ಅಷ್ಟೇ ಅಪಾಯಕಾರಿ ಅನ್ನುವುದು ಕೂಡ ನಿಮಗೆ ಗೊತ್ತಿರಲಿ. ಒಂದು ವೇಳೆ ಈ ಹೂವನ್ನು ಅಥವಾ ಅದರ ಎಲೆಯನ್ನು ನೀವು ಮುಟ್ಟಿದ್ರೆ ತಕ್ಷಣ ಸೋಪು ಬಳಸಿ ಕೈ ತೊಳೆದುಕೊಳ್ಳಿ. ಈ ಹೂವು ಮುಟ್ಟಿದ ಬಳಿಕ ಬಾಯಿ, ಮೂಗು, ಕಣ್ಣಿಗೆ ಕೈ ತೊಳೆಯದೆ ಕೈ ಹಾಕಬೇಡಿ. ಇವತ್ತಿನ ಈ ಮಾಹಿತಿ ಇಷ್ಟವಾಯಿತು ಅಂತ ಅಂದ್ಕೊಳ್ತಿನಿ..ಮುಂದಿನ ಸಂಪಾದಕೀಯದೊಂದಿಗೆ ಮುಂದಿನ ವಾರ ಸಿಗ್ತಿನಿ, ಧನ್ಯವಾದಗಳು.. ನಮಸ್ಕಾರ..