ನ್ಯೂಸ್ ನಾಟೌಟ್: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಇದರಿಂದ ಮೂವರು ಪೊಲೀಸರಿಗೆ ಗಾಯಗೊಂಡಿದ್ದಾರೆ. ಆರೋಪಿ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವ ಕರಾವಳಿ ಮೂಲದ ಸುಂದರ ಯುವತಿಯರ ಜೊತೆಗೆ ಚಾಟ್ ಮಾಡುತ್ತಾ ಅವರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ, ಕೆಲವು ದಿನ ಯುವತಿಯರೊಂದಿಗೆ ಚಾಟ್ ಮಾಡುತ್ತಾ ಅವರ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಾ ಆತ್ಮೀಯತೆ ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.
ಯುವತಿಯರೊಂದಿಗೆ ಖಾಸಗಿ ಫೋಟೋ ತೆಗೆದುಕೊಂಡರೆ, ಇನ್ನು ಕೆಲವರ ಸಾಮಾನ್ಯ ಫೋಟೋ ತೆಗೆದುಕೊಳ್ಳುತ್ತಿದ್ದ. ನಂತರ ಅಶ್ಲೀಲವಾಗಿ ಎಡಿಟ್ ಮಾಡಿ ಅವುಗಳನ್ನು ಯುವತಿಯರಿಗೆ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದೀಗ ಕೊನೆಗೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.