ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (NMC) ಇತ್ತೀಚೆಗೆ (ಮೇ22) ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು. ಕಾಲೇಜು ದಿನಗಳ ಸವಿ ನೆನಪನ್ನು ಮೆಲುಕು ಹಾಕುತ್ತಾ ಹಲವಾರು ಮಂದಿ ಹಿರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು.
ಮೇ 22 ಮತ್ತು 23ರಂದು ನಡೆದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ , ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಪ್ರಾಂಶುಪಾಲ ಡಾ. ರಾಧಾಕೃಷ್ಣ ಎಚ್. ಬಿ. ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದರು.
ಸಭೆಯ ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಎಂ. , ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂ ಎಂ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕ ಜೋಸ್ಬಿನ್ ಬಾಬು ಸ್ವಾಗತಿಸಿ, ಉಪನಾಯಕಿ ನಿರೀಕ್ಷ ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಕೃಷ್ಣರಾಜ್ ಪ್ರಮಾಣ ವಚನ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಕು. ಕುಲಶ್ರೀ ಧನ್ಯವಾದ ಸಮರ್ಪಿಸಿದರು. ಕು. ರತ್ನಸಿಂಚನ ಮತ್ತು ಕು. ಉಜಾನ ಪ್ರಾರ್ಥಿಸಿ, ಕು. ಅನ್ವಯ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಕ ಪಥಸಂಚಲನ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳು ದೈಹಿಕ ಶಿಕ್ಷಕ ಲೆ. ಸೀತಾರಾಮ ಎಂ. ಡಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರ ನೇತೃತ್ವದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಕೆ. ಟಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಮಧುರಾ ಎಂ ಆರ್ ಹಾಗೂ ಸಂಘದ ಪ್ರತಿನಿಧಿಗಳು ಮತ್ತು ಸದಸ್ಯರು ಭಾಗವಹಿಸಿದರು. ದೈಹಿಕ ಶಿಕ್ಷಣ ತರಬೇತುದಾರರಾದ ನಾಗರಾಜ್ ಮತ್ತು ಮಿತನ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.