ನ್ಯೂಸ್ ನಾಟೌಟ್:ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರ ಅಕ್ಷರಶಃ ರಣಾಂಗಣವಾಗಿದೆ. ಮಟ್ಕಾ ಕೇಸಿನಲ್ಲಿ ಅರೆಸ್ಟ್ ಆಗಿ ಕರೆ ತಂದಿದ್ದ ವ್ಯಕ್ತಿ ಹಠಾತ್ ಸಾವಿಗೀಡಾಗಿದ್ದಾನೆ. ಈ ಬೆನ್ನಲ್ಲೇ ಪೊಲೀಸರು ಆತನನ್ನು ಕೊಂದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದೆ.
ಈ ದುರ್ಘಟನೆಯಲ್ಲಿ 11 ಮಂದಿ ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂಗೊಂಡಿದೆ. ಸದ್ಯ ಪೊಲೀಸರು ವಾತಾವರಣವನ್ನು ಹಿಡಿತಕ್ಕೆ ತಗೆದುಕೊಂಡಿದ್ದಾರೆ. ಉದ್ರಿಕ್ತರಿಗೆ ಲಾಠಿ ಬಿಸಿ ತೋರಿಸಲಾಗಿದೆ ಎಂದು ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಒಸಿ (ಮಟ್ಕಾ) ಆಡಿಸುತ್ತಿದ್ದ ಹಿನ್ನಲೆ ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಆದಿಲ್ (30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಆದಿಲ್ ಠಾಣೆಯಲ್ಲಿ ಕುಸಿದು ಬಿದ್ದಿದ್ದಾನೆ. ಕೂಡಲೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ. ಆದಿಲ್ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.