ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕುಡಿಯುವ ನೀರಿನ ಸ್ಥಿತಿ ಶೋಚನೀಯವಾಗಿದೆ. ನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಪೂರ್ಣ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ಈ ನೀರನ್ನು ಕುಡಿಯುವುದಕ್ಕೆ ಬಿಡಿ, ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ.
ಓದುಗರೊಬ್ಬರು ಕಲುಷಿತ ನೀರಿನ ಫೋಟೋ ತೆಗೆದು ‘ನ್ಯೂಸ್ ನಾಟೌಟ್ ‘ ಮಾಧ್ಯಮ ಸಂಸ್ಥೆಗೆ ಕಳಿಸಿಕೊಟ್ಟಿದ್ದಾರೆ. ‘ಇದಕ್ಕೊಂದು ಪರಿಹಾರ ಮಾಡಿ ಮಾರಾಯ್ರೆ’ ಅಂತ ಮನವಿ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಆದರೆ ಸುಳ್ಯದ ಜನ ಕಳೆದ ಕೆಲವು ತಿಂಗಳಿನಿಂದ ಈ ‘ಕಳೆಂಕ್’ ನೀರನ್ನು ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.
ಮನುಷ್ಯನಿಗೆ ಸರ್ಕಾರ, ಆಡಳಿತಾಧಿಕಾರಿಗಳು ಪೂರೈಸಬೇಕಿರುವುದು ಶುದ್ಧ ಕುಡಿಯುವ ಜಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೂಡ ಇದನ್ನೇ ಪ್ರತಿಪಾದಿಸುತ್ತವೆ. ಆದರೆ ಜನರಿಗೆ ಕುಡಿಯುವ ನೀರು ಮಾತ್ರ ಅಶುದ್ಧವಾಗಿಯೇ ತಲುಪುತ್ತಿರುವುದು ವಿಪರ್ಯಾಸ.
ಬಹುತೇಕರು ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರಿರುವ ಸುಳ್ಯ ನಗರಕ್ಕೆ ಇಂತಹ ನೀರು ಪೂರೈಕೆಯಾಗುತ್ತಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.