ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ ವಿಡಿಯೊ ಮಾಡಿದ್ದಾರೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್ ದೂರು ನೀಡಿದೆ. ರಾಯಚೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಇದನ್ನು ಉಲ್ಲೇಖಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜೆಡಿಎಸ್ ನಾಯಕ ಎಚ್.ಎಂ ರಮೇಶ್ ಗೌಡ ದೂರು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 202ರಡಿ ದೂರು ದಾಖಲಿಸಬೇಕು ಎಂದು ಕೋರಿದ್ದಾರೆ. “ಹೆಚ್.ಎಂ.ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.
ಕಾಂಗ್ರೆಸ್ ನಾಯಕ, ವೈನಾಡು ಲೋಕಸಭೆ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು” ಎಮದು ದೂರಿನಲ್ಲಿ ವಿವರಿಸಲಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Click 👇