ನ್ಯೂಸ್ ನಾಟೌಟ್: ಸಿನಿಮೀಯ ರೀತಿಯಲ್ಲಿ ಡಿವೈಎಸ್ಪಿ ಒಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ದೋಚಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ. ಹಾಸನ (Hassan) ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಖಾತೆಯಿಂದಲೇ 15,98,761 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಗೆ ಮುರಳೀಧರ್ ದೂರು ದಾಖಲಿಸಿದ್ದಾರೆ. ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯಶಾಖೆ ಹಾಗೂ ಭಾಗಮಂಡಲದ ಕೆನರಾಬ್ಯಾಂಕ್ನ ಶಾಖೆಯಲ್ಲಿ ಪಿ.ಕೆ.ಮುರಳೀಧರ್ ಖಾತೆಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1:30ರ ವೇಳೆಗೆ ಡಿವೈಎಸ್ಪಿ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್ಗಳು ಬಂದಿವೆ. ಇದಾದ ನಂತರ ತಮ್ಮ ಗಮನಕ್ಕೇ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.
ಮಡಿಕೇರಿಯಲ್ಲಿರುವ ಕೆನರಾ ಬ್ಯಾಂಕ್ ಮುಖ್ಯಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ. ವರ್ಗಾವಣೆ ಮಾಡಿದ್ದಾರೆ. ಕೆನರಾಬ್ಯಾಂಕ್ ಭಾಗಮಂಡಲ ಶಾಖೆ ಖಾತೆಯಿಂದ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ 3,88,050 ರೂ. ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ. ಹಣವನ್ನು ಸೈಬರ್ ಕಳ್ಳರು ಬೇರೆ ಖಾತೆಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.