ನ್ಯೂಸ್ ನಾಟೌಟ್: ಮಳೆಗಾಲ ಬಂತೆಂದರೆ ಸಾಕು ನಿಂತ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳ ಹಾವಳಿ ವಿಪರೀತ ಹೆಚ್ಚು. ಜನರಿಗೆ ವಿವಿಧ ಅಪಾಯಕಾರಿ ಸೋಂಕು ತರಬಲ್ಲ ಸೊಳ್ಳೆಗಳಲ್ಲಿ ಡೆಂಗ್ಯೂ ಜ್ವರವನ್ನು ಹರಡಬಲ್ಲ ಅಪಾಯಕಾರಿ ಸೊಳ್ಳೆಯೂ ಕೂಡ ಒಂದು. ಹೀಗಾಗಿ ಇಂತಹ ಸೊಳ್ಳೆಗಳನ್ನು ನಿಯಂತ್ರಿಸುವುದು ಹೇಗೆ..? ಡೆಂಗ್ಯೂ ಹರಡದಂತೆ ತಡೆಯುವುದು ಹೇಗೆ..? ಇದೆಲ್ಲದರ ಕುರಿತು ಜಾಗೃತಿ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇ20ರಂದು ಆಚರಿಸಲಾಯಿತು. ಪ್ರತಿ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಮೇ 16 ರಂದು ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಡೆಂಗ್ಯೂನ ಕ್ಲಿನಿಕಲ್ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುವ ವಿಶೇಷವಾದ ಸ್ಕಿಟ್ ನೊಂದಿಗೆ ಪ್ರಾರಂಭವಾಯಿತು. ನಂತರ ಕೆವಿಜಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಕ್ಷೇಪ್ ಮತ್ತು ಸಮುದಾಯ ವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ದಿನೇಶ್ ಪಿ ವಿ ಮಾತನಾಡಿದರು. ಈ ಚರ್ಚೆಯು ಈಡಿಸ್ ಸೊಳ್ಳೆ, ಡೆಂಗ್ಯೂಗೆ ಕಾರಣವಾಗುವ ವೈರಸ್, ಮನುಷ್ಯರಿಗೆ ಹರಡುವುದು, ಕ್ಲಿನಿಕಲ್ ಅಭಿವ್ಯಕ್ತಿ ಮತ್ತು ಡೆಂಗ್ಯೂ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಈಡಿಸ್ ಸೊಳ್ಳೆಗಳನ್ನು ಗುರುತಿಸಲು ಸಹಾಯ ಮಾಡಲು ಸೊಳ್ಳೆಯ ಮಾದರಿ ತೋರಿಸಲಾಯಿತು ಮತ್ತು ಲಾರ್ವಾವನ್ನು ಹೇಗೆ ಗುರುತಿಸುವುದು ಎಂಬುದರ ವೀಡಿಯೋ ಮೂಲಕ ತೋರಿಸಲಾಯಿತು. ಕವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ನೀಲಾಂಬಿಕೈ ನಟರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಮ್ಯುನಿಟಿ ಮೆಡಿಸಿನ್ ವಿಭಾಗ ಸೀನಿಯರ್ ರೆಸಿಡೆಂಟ್ ಡಾ |ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು.
Click 👇