ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರವು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 100 ಪ್ಲಸ್ ಕೋಟಿ ಗಳಿಕೆ ಮಾಡಿದೆ. ಗುರುವಾರ ಬಿಡುಗಡೆಯಾದ ಚಿತ್ರವು ಭಾನುವಾರ ರಾತ್ರಿಯ ಹೊತ್ತಿಗೆ ಈ ಸಾಧನೆ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಕನ್ನಡದ ಯಾವೊಂದು ಚಿತ್ರ ಸಹ ಇಷ್ಟು ಕಡಿಮೆ ಸಮಯದಲ್ಲಿ 100 ಕೋಟಿ ರೂ.ಗಳ ಕ್ಲಬ್ ಗೆ ಬಂದಿರಲಿಲ್ಲ. ಈಗ ಆ ದಾಖಲೆಯನ್ನು ಜೇಮ್ಸ್ ಮಾಡಿದೆ. ಇದು ಬರೀ ಕರ್ನಾಟಕದಲ್ಲಿ ಗಳಿಸಿದ ಮೊತ್ತವಷ್ಟೇ ಅಲ್ಲ, ಜಗತ್ತಿನಾದ್ಯಂತ ಒಟ್ಟು ಐದು ಭಾಷೆಗಳ ಗ್ರಾಸ್ ಗಳಿಕೆ ಇದು. ಒಟ್ಟಾರೆ ಒಂದು ವಾರದಲ್ಲಿ ಬಾಡಿಗೆ, ಪರ್ಸಂಟೇಜ್ ಎಲ್ಲವೂ ಕಳೆದು ನಿರ್ಮಾಪಕರಿಗೆ 60 ಕೋಟಿ ರೂ.ಗಳು ಸಿಗಬಹುದು ಎಂಬ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದ 60 ಕೋಟಿ ರೂ.ಗಳು ನಿರ್ಮಾಪಕರಿಗೆ ಸಿಕ್ಕಿದೆಯಂತೆ. ಅಲ್ಲಿಗೆ, ನಿರ್ಮಾಪಕರಿಗೆ 120 ಕೋಟಿ ರೂ. ಆದಾಯ ಸಿಗಬಹುದು ಎಂದು ಹೇಳಲಾಗುತ್ತಿದೆ. ಈ ಪೈಕಿ, ಚಿತ್ರದ ಬಜೆಟ್ 30ರಿಂದ 40 ಕೋಟಿ ಮೈನಸ್ ಮಾಡಿದರೂ, ನಿರ್ಮಾಪಕರಿಗೆ 80 ಕೋಟಿ ರೂ. ಲಾಭ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.
ಇದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆದರೂ ಒಂದು ಲೆಕ್ಕ ಸಿಗುತ್ತದೆ. ಆದರೆ, ಇದರ ಸುತ್ತ ಒಂದಿಷ್ಟು ವಿಷಯಗಳಿಗೆ ನಿರ್ಧಿಷ್ಟವಾಗಿ ಲೆಕ್ಕ ಸಿಗುವುದಿಲ್ಲ. ಟಿಕೆಟ್ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಒಂದು ಲೆಕ್ಕ ಮಾಡಬಹುದು. ಆದರೆ, ಕಳೆದ ಐದು ದಿನಗಳಲ್ಲಿ ಪ್ರತೀ ಚಿತ್ರಮಂದಿರದಲ್ಲಿ ವಾಹನಗಳಿಂದ ಪಾರ್ಕಿಂಗ್ ನಿಂದ ಎಷ್ಟು ಹಣ ಬಂದಿದೆ? ಕ್ಯಾಂಟೀನ್ನಲ್ಲಿ ಎಷ್ಟು ವ್ಯಾಪಾರವಾಗಿದೆ? ಬ್ಲಾಕ್ ಟಿಕೆಟ್ ಮಾರಾಟದಿಂದ ಎಷ್ಟು ಹಣ ಬಂದಿರಬಹುದು? ಸ್ವಲ್ಪ ಕಷ್ಟವಾದರೂ ಇದಕ್ಕೂ ಒಂದು ಲೆಕ್ಕ ಸಿಗುತ್ತದೆ.
ಆದರೆ, ಲೆಕ್ಕ ಸಿಗದಿರುವುದು ಅಭಿಮಾನಕ್ಕೆ ಮಾತ್ರ. ವೀರೇಶ ಚಿತ್ರಮಂದಿರವೊಂದರಲ್ಲೇ 31 ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಒಟ್ಟಾರೆ ರಾಜ್ಯದ 400 ಪ್ಲಸ್ ಚಿತ್ರಮಂದಿರಗಳಲ್ಲಿ ಒಟ್ಟು ಎಷ್ಟು ಕಟೌಟ್ಗಳನ್ನು ನಿಲ್ಲಿಸಿರಬಹುದು? ಆ ಕಟೌಟ್ಸ್ಗೆ ಎಷ್ಟು ಹಣ ಖರ್ಚಾಗಿರಬಹುದು? ಆ ಕಟೌಟ್ಗೆ ಹಾಕಲಾದ ಹಾರಗಳಿಗೆ? ಪಟಾಕಿಗೆ? ಚಿತ್ರಮಂದಿರಗಳ ಸಿಂಗಾರಕ್ಕೆ? ಪುನೀತ್ ಹುಟ್ಟುಹಬ್ಬದಂದು ಕತ್ತರಿಸಲಾದ ಕೇಕ್ಗಳಿಗೆ? ಅಂದು ಹಂಚಲಾದ ಬಿರಿಯಾನಿ, ಪಲಾವ್, ಉಪ್ಪಿಟ್ಟು-ಕೇಸರಿಬಾತ್ಗೆ? ನಾಲ್ಕು ದಿನಗಳ ಕಾಲ ಹಂಚಲಾದ ಸ್ವೀಟ್ ಗಳಿಗೆ? ಪುನೀತ್ ಪ್ರತಿಮೆಗಳಿಗೆ ಮಾಡಿದ ಹೂವಿನ ಅಲಂಕಾರಕ್ಕೆ? ಫೆಕ್ಸ್ ಗಳಿಗೆ? ನೀರು, ಪಾನಕ, ಮಜ್ಜಿಗೆಗಳಿಗೆ? ಇತ್ಯಾದಿ ಇತ್ಯಾದಿ … ಒಟ್ಟು ಎಷ್ಟು ಹಣ ಖರ್ಚಾಗಿರಬಹುದು? ಚಿತ್ರತಂಡದವರು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿರಬಹುದು. ಮಿಕ್ಕಂತೆ ರಾಜ್ಯದ ಮೂಲೆಮೂಲೆಗಳಲ್ಲಿ, ಅಷ್ಟೊಂದು ಚಿತ್ರಮಂದಿರಗಳಲ್ಲಿ… ಹೀಗೆ ದುಡ್ಡು ಕೊಟ್ಟಿರುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ, ಇವೆಲ್ಲ ಹೇಗೆ ಸಾಧ್ಯವಾಯಿತು?
ಇವೆಲ್ಲ ಸಾಧ್ಯವಾಗಿದ್ದು ಅಭಿಮಾನದಿಂದ ಮಾತ್ರ. ಅದೆಷ್ಟು ಜನ ತಮ್ಮ ಕೈಯಿಂದ ದುಡ್ಡು ಹಾಕಿ ಬೇರೆಯವರ ಹೊಟ್ಟೆ ತುಂಬಿಸಿದರೋ? ಅದ್ಯಾಕೆ ಆ ಪರಿ ಸಂಭ್ರಮಿಸಿದರೋ? ಅವರಿಗೆ ಯಾಕೆ ಹೀಗೆ ಖರ್ಚು ಮಾಡಬೇಕೆಂದಿನಿಸಿತು? ಅವರಲ್ಲಿ ಅದೆಷ್ಟು ಜನರ ಪರಿಚಯ ಪುನೀತ್ಗಿತ್ತು, ಈ ಅಭಿಮಾನದ ನೆಪದಲ್ಲಿ ಒಟ್ಟಾರೆ ಅದೆಷ್ಟು ಕೋಟಿ ರೂ. ಖರ್ಚಾಯಿತೋ? ಗೊತ್ತಿಲ್ಲ. ಆದರೆ, ಅವರು ಇಷ್ಟೆಲ್ಲ ಮಾಡಿದ್ದು ಪುನೀತ್ ಅವರ ಮೇಲಿನ ಅಭಿಮಾನದಿಂದ ಎಂದರೆ ತಪ್ಪಿಲ್ಲ. ಬೇರೆ ಯಾವುದಕ್ಕೆ ಲೆಕ್ಕ ಸಿಕ್ಕರೂ, ಈ ಅಭಿಮಾನಕ್ಕೆ ಲೆಕ್ಕ ಸಿಗುವುದಿಲ್ಲ. ಅಷ್ಟೇ ಅಲ್ಲ, ಈ ಅಭಿಮಾನಕ್ಕೆ ಬೆಲೆ ಕಟ್ಟುವುದಕ್ಕೂ ಸಾಧ್ಯವಿಲ್ಲ.