ನ್ಯೂಸ್ ನಾಟೌಟ್: ಜೀವನದಲ್ಲಿ ನಾವು ಎಷ್ಟೋ ಕಷ್ಟಗಳನ್ನು ಅನುಭವಿಸುತ್ತೇವೆ. ಆದರೆ ಇಲ್ಲೊಂದು ಕಡೆ ತಾಯಿ-ಮಗಳು ಅನುಭವಿಸಿದ ಕಷ್ಟದ ಎದುರು ನಮ್ಮ ಕಷ್ಟ ಏನಿಲ್ಲ ಅನ್ನಿಸಿಬಿಡುತ್ತೆ.
ಹೌದು, ಮಗಳು ವಿಶೇಷ ಚೇತನ ಯುವತಿ, ಆಕೆ ಹೆಸರು ಪ್ರಗತಿ (32 ವರ್ಷ). ತಾಯಿಯ ಹೆಸರು ಜಯಂತಿ ಶೆಟ್ಟಿ (61 ವರ್ಷ). ಇವರು ಕುಂದಾಪುರದ ಗೋಪಾಡಿ ಗ್ರಾಮದ ಮೂಡು ಗೋಪಾಡಿಯ ದಾಸನಹಾಡಿಯ ನಿವಾಸಿ. ವಿಶೇಷ ಚೇತನ ಹುಡುಗಿಗೆ ತಾಯಿ ಆಸರೆಯಾಗಿದ್ದರು. ಇವರಿಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ. ತಾಯಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ತನಕ ಈ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ಕೊಳೆತ ವಾಸನೆ ಹೊಡೆಯುತ್ತಿದ್ದದರಿಂದ ಸ್ಥಳೀಯರು ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರೆಲ್ಲರು ಸೇರಿ ವಿಶೇಷ ಚೇತನ ಯುವತಿಯನ್ನು ರಕ್ಷಣೆ ಮಾಡ್ತಾರೆ. ಆದರೆ ದುರಾದೃಷ್ಟವಶಾತ್ ಪ್ರಗತಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಪತಿಯ ಸಾವಿನ ಬಳಿಕ ದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ವಿಶೇಷ ಚೇತನ ಪುತ್ರಿ ಪ್ರಗತಿ ಯೊಂದಿಗೆ ನೆಲೆಸಿದ್ದರು. ಈಕೆ ಸಣ್ಣ ವಯಸ್ಸಿಗೆ ಬುದ್ಧಿಮಾಂದ್ಯಳಾಗಿದ್ದಳು. ಇತ್ತೀಚೆಗೆ ಆಕೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಲಾಗಿದೆ. ಇಷ್ಟೆಲ್ಲ ನೋವಿನ ನಡುವೆ ತಾಯಿ ಜಯಂತಿ ಶೆಟ್ಟಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಮೇ12ರಂದು ಮಗಳ ಆರೋಗ್ಯದಲ್ಲಿ ಚೇತರಿಕೆಯಾಗಬೇಕು ಅನ್ನುವ ಸದುದ್ದೇಶದಿಂದ ತಾಯಿ ಜಯಂತಿ ಆನೆಗುಡ್ಡೆ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಮೇ 13ರಂದು ಕೋಟೇಶ್ವರ ದೇವ ಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುವುದಿದೆ ಎಂದು ಸ್ಥಳೀಯ ಆಟೋ ಚಾಲಕರೊಬ್ಬರಿಗೆ ತಿಳಿಸಿದ್ದರು. ಆಟೋ ಚಾಲಕ ಬೆಳಗ್ಗೆ ಫೋನ್ ಮಾಡಿದರೆ ಜಯಂತಿ ಫೋನ್ ಅನ್ನು ರಿಸೀವ್ ಮಾಡಿರಲಿಲ್ಲ. ಹೀಗಾಗಿ ಈ ಸಮಯದಲ್ಲಿ ಮಹಿಳೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಗೋಡೆಯಲ್ಲಿ ರಕ್ತದ ಕಲೆ ಇರುವುದರಿಂದ ಈಕೆ ಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇದಾದ ಬಳಿಕ ಮಗಳು ಪ್ರಗತಿ ಮೂರು ದಿನಗಳ ಕಾಲ ಅನ್ನ, ನೀರಿಲ್ಲದೆ ಮೂರು ದಿನಗಳ ಕಾಲ ಒಬ್ಬಳೇ ಕಳೆದಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.
ಜಯಂತಿ ಬಿದ್ದು ಗಾಯಗೊಂಡಿದ್ದರು. ಅವರಿಗೆ ಮಧುಮೇಹ, ಅಧಿಕ ರಕ್ತ ದೊತ್ತಡವೂ ಇದ್ದುದರಿಂದ ಗಂಭೀರಗೊಂಡು ಸಾವನ್ನಪ್ಪಿರಬಹುದು ಎಂದು ಸಂಶಯಿಸಲಾಗಿದೆ. ಗೋಡೆ, ನೆಲದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ಏನು ಕಾರಣ ಅನ್ನುವುದು ತಿಳಿದು ಬರಲಿದೆ. ಪ್ರಗತಿಗೆ ಮೇ 14ರಂದು ಆಕೆಗೆ ಕೃತಕ ಕಾಲು ಜೋಡಣೆ ಆಗಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿದ್ದು ವಿಪರ್ಯಾಸ.
Click 👇