ನ್ಯೂಸ್ ನಾಟೌಟ್: ಪಾಗಲ್ ಪ್ರೇಮಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾದ ಕೊಡಗಿನ ಹುಡುಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಮೀನಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಗುರುವಾರ (ಮೇ16) ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಬಾಲಕಿ ಮೀನಾಳ ಮನೆಗೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಮನುಕುಲ ಒಪ್ಪಿಕೊಳ್ಳದ ಹೇಯ ಕೃತ್ಯವನ್ನು ಆರೋಪಿ ಎಸಗಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಂತಕನನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ನಮ್ಮ ಇಲಾಖೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಮೀನಾಳ ಕುಟುಂಬಕ್ಕೆ ನ್ಯಾಯ ಒದಗಿಸುವುದು ನಮ್ಮ ಆಧ್ಯತೆಯಾಗಿದೆ. ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸರ್ಕಾರ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸುತ್ತಿದೆ. ಮೀನಾ ಪ್ರಕರಣಕ್ಕೂ ಒಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾತು ಮುಂದುವರಿಸಿದ ಅವರು, ಮೀನಾಳ ಕುಟುಂಬದ ಸ್ಥಿತಿಯನ್ನು ನೋಡುವುದಕ್ಕೆ ಆಗುವುದಿಲ್ಲ. ಮನೆಯಲ್ಲಿ ಬಹಳ ಬಡತನವಿದೆ. ಈ ಕುಟುಂಬದ ಜೊತೆ ಇಷ್ಟು ದೊಡ್ಡ ಅನ್ಯಾಯ ಆಗಬಾರದಿತ್ತು ಎಂದು ತಿಳಿಸಿದರು.
ಇತ್ತೀಚೆಗೆ ಎಸ್ ಎಸ್ ಎಲ್ ಸಿ ಹುಡುಗಿಯನ್ನು ಮದುವೆಯಾಗುವುದಕ್ಕೆ ಬಿಡುತ್ತಿಲ್ಲ ಅನ್ನುವ ಅಸಮಾಧಾನದಿಂದ ಓಂಕಾರಪ್ಪ ಅನ್ನುವ ವ್ಯಕ್ತಿ ಬಾಲಕಿಯ ಮನೆಯವರ ಮೇಲೆ ಸಿಟ್ಟಿನಿಂದ ಮನೆಯವರ ಮೇಲೆಲ್ಲ ದಾಳಿ ಮಾಡಿದ್ದ. ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿದ್ದಲ್ಲದೆ ರುಂಡವನ್ನೇ ತೆಗೆದುಕೊಂಡು ಹೋಗಿದ್ದ. ಇಡೀ ಕೊಡಗನ್ನೇ ನಡುಗಿಸಿದ್ದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಘಟನೆ ನಡೆದ ಮರು ದಿನವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
Click 👇