ನ್ಯೂಸ್ ನಾಟೌಟ್: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಮರವನ್ನು ಸ್ಥಳೀಯರು, ಊರವರು, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿಕೊಂಡು ಸಂಘಟಿತವಾಗಿ ಕೆಲಸ ಮಾಡುವ ಮೂಲಕ ತೆರವುಗೊಳಿಸಿದ್ದಾರೆ. ಈ ಮೂಲಕ ಮತ್ತೆ ಬೆಂಗಳೂರು, ಮೈಸೂರು ಕಡೆಗೆ ವಾಹನಗಳು ಸಂಚರಿಸಿದರೆ ಇತ್ತ ಸುಳ್ಯ , ಪುತ್ತೂರು, ಮಂಗಳೂರು ಕಡೆಗೆ ವಾಹನಗಳ ಸಂಚಾರ ಪುನರಾರಂಭಗೊಂಡವು.
ಸುಮಾರು ಎರಡು ಕಿ.ಮೀ. ತನಕ ಭಾರಿ ಟ್ರಾಫಿಕ್ ಜಾಮ್ ಆಗಿತ್ತು. ಇಂತಹ ಸಂದರ್ಭದಲ್ಲಿ ಕೊಡಗು ಸಂಪಾಜೆ ಎಎಸ್ ಐ ರಾಜು, ದಕ್ಷಿಣ ಕನ್ನಡ ಸಂಪಾಜೆಯ ಹೆಡ್ ಕಾನ್ ಸ್ಟೇಬಲ್ ರಾಜು, ಅರಣ್ಯ ಪಾಲಕ ಚಂದ್ರು , ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಹಾಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ .ಕೆ ಹನೀಫ್, ಶಮೀರ್ ತಾಜ್, ಶೇಖರ ಊರು ಬೈಲು , ಹೋಮ್ ಗಾರ್ಡ್ ರಾಮ್ ರಾಜ್, ಓಂ ಪ್ರಕಾಶ್ ಸಂಪಾಜೆ, ಶೇಖರ ಮಾರ್ಪಡ್ಕ ಮತ್ತಿತರರು ಮರ ತೆರವುಗೊಳಿಸಲು ಸಹಕರಿಸಿದರು. ಜೋಸೆಫ್ ಸಂಪಾಜೆ, ಉಮ್ಮರ್ ಚಟ್ಟೆಕಲ್ಲು ಮರ ಕೊಯ್ಯಲು ನೆರವಾದರು. ವಿವಿ ಪ್ರಶಾಂತ್ ಹಾಗೂ ಮೊಗ್ರೊಡಿ ಕನ್ ಸ್ಟ್ರಕ್ಷನ್ ಅವರ ತಲಾ ಎರಡು ಜೆಸಿಬಿಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಜೊತೆಗೆ ಹಲವಾರು ಮಂದಿ ಊರಿನವರು ಕೂಡ ಈ ಕೆಲಸಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು.