ನ್ಯೂಸ್ ನಾಟೌಟ್: ನಿಫಾ, ಹಕ್ಕಿಜ್ವರ, ಹಂದಿಜ್ವರದ ಬಳಿಕ ಈಗ ವೆಸ್ಟ್ ನೈಲ್ (West Nile) ಜ್ವರದ ಭೀತಿ ರಾಜ್ಯಕ್ಕೂ ಕಾಡುತ್ತಿದೆ. ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಾಗಿ ತಲೆದೋರಿದ್ದು, ಮೈಸೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ ಡಿ ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಗಡಿಯೊಳಗೆ ಬಂದು ಹೋಗುವ ವಾಹನಗಳ ಸವಾರರ ಮೇಲೆ ನಿಗಾ ಇರಿಸಿದ್ದಾರೆ. ಕೇರಳದಲ್ಲಿ ಕಾಣಿಸಿಕೊಂಡ ಜ್ವರಕ್ಕೆ ಮೈಸೂರು ಗಡಿಭಾಗದಲ್ಲಿ ಅಲರ್ಟ್ ಮಾಡಲಾಗಿದೆ.
ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಆಗುವುದು, ದಿಗ್ಭ್ರಮೆಗೊಳ್ಳುವುದು, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು. ತೀವ್ರ ಅನಾರೋಗ್ಯದ ಈ ಸ್ಥಿತಿಗಳಿಂದ ಚೇತರಿಸಿಕೊಳ್ಳಲು ಹಲವಾರು ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ನೈಲ್ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಮೂರು ಜಿಲ್ಲೆಗಳಾದ ತ್ರಿಶೂರ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ನಲ್ಲಿ ವರದಿಯಾಗಿದೆ. ಸೋಮವಾರ ಒಬ್ಬ ವ್ಯಕ್ತಿ ವೈರಲ್ ಕಾಯಿಲೆಯಿಂದ ಮೃತಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಆರು ಪ್ರಕರಣಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಪ್ರದೇಶಗಳಲ್ಲಿ ಜಾಗರೂಕರಾಗಿರಲು ಸೂಚಿಸಿದ್ದಾರೆ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.
Click 👇