ನ್ಯೂಸ್ ನಾಟೌಟ್: ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ತುಳುನಾಡಿನ ದೈವಗಳ ಕುರಿತು ಜನರಿಗೆ ಹೆಚ್ಚು ಪರಿಚಯ ಆಗಿದೆ. ದೈವದ ಕುರಿತು ಸಿನಿಮಾಗಳು ಕೂಡ ಬರುತ್ತಿವೆ. ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡುತ್ತಿರುವ ‘ಕೊರಗಜ್ಜ’ ಸಿನಿಮಾ (Koragajja Movie) ಇತ್ತೀಚೆಗೆ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕೊರಗಜ್ಜನ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ ವಿವಾದದ ಹೇಳಿಕೆ ನೀಡಿದ್ದು, ಈ ಬಗ್ಗೆ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಕ್ಸಸ್ ಫಿಲಂಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಬ್ಯಾನರ್ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಸುಧೀರ್ ಅತ್ತಾವರ್ ನಿರ್ದೇಶನ ಮಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸುಧೀರ್ ಅತ್ತಾವರ, ಎಂಜಲು ಊಟದ ಪದ್ದತಿ ಈಗಲೂ ಕೊರಗ ಕಮ್ಯುನಿಟಿಯಲ್ಲಿ ಇದೆ, ಸೀಮಂತದ ವೇಳೆ ಆಕೆ ಬಿಟ್ಟ ಊಟವನ್ನು ಕೊರಗ ಜನಾಂಗದವರು ತಿನ್ನಬೇಕು ಎಂಬ ಪದ್ದತಿ ಇದೆ ಎಂದಿದ್ದಾರೆ. ಜೊತೆಗೆ ಈಗ ಎಲ್ಲರೂ ಕೊರಗಜ್ಜನಿಗೆ ಬ್ರಾಂಡಿ, ವಿಸ್ಕಿ ಕುಡಿಸ್ತಾರೆ, ೮೦೦ ವರ್ಷಗಳ ಹಿಂದೆ ಈ ಬ್ರಾಂಡಿ, ವಿಸ್ಕಿ ಎಲ್ಲಿತ್ತು, ಈಗ ಎಲ್ಲರೂ ಅದನ್ನು ಇಟ್ಟು ನಮಸ್ಕರಿಸಿ ಬರ್ತಾರೆ ಎಂದದ್ದು ಚರ್ಚೆಗೆ ಕಾರಣವಾಗಿದೆ. ಕೊರಗಜ್ಜನಿಗೆ ಸೊಂಟ ಇಲ್ಲದ ತರ ಕುಣಿಸಿ ಆರಾಧಿಸ್ತಾರೆ, ಬರಿ ಸಾರಾಯಿಯನ್ನೇ ಕುಡಿಸ್ತಾರೆ ಎಂದು ಕೊರಗ ಪಂಗಡದವರು ದೂರುತ್ತಿದ್ದಾರೆ ಎಂಬ ಮಾತನ್ನೂ ನಿರ್ದೇಶಕ ಉಲ್ಲೇಖಿಸಿದ್ದಾರೆ. ನಾನು ಈ ಸಿನಿಮಾ ಮಾಡಲು ಕೊರಗ ಜನಾಂಗದವರ ಬಳಿ ಅನುಮತಿ ಕೇಳಿದ್ದೇನೆ ಎಂದಿದ್ದಾರೆ.
‘ಈ ಮನುಷ್ಯ ಪೂರ್ವಗ್ರಹ ಪೀಡಿತನಾಗಿ ಮಾತಾಡುತ್ತಿದ್ದಾನೆ , ಯಾವುದೊ ಒಂದು ಪಂಗಡ ಇವನ ಸಿನಿಮಾಕ್ಕೆ ವಿರೋಧ ಮಾಡಬಾರದೆಂದು ಹೀಗೆಲ್ಲ ಮಾತಾಡಿ ಜಾತಿ ಜಾತಿ ಗಳ ಮಧ್ಯೆ ವೈಷಮ್ಯ ತರುವ ಪ್ರಯತ್ನ ಮಾಡುತ್ತಿದ್ದಾನೆ. ಕೊರಗ ಜಾತಿಯವರೇ ಕೊರಗಜ್ಜನ ದರ್ಶನ ಸೇವೆ ಮಾಡುತ್ತಿದ್ದಾರೆ ಆದ್ರೆ ಇವ ಅವರಿಗೆ ಪ್ರಾಧಾನ್ಯತೆ ಕೊಡುತ್ತಿಲ್ಲ ಅನ್ನುತ್ತಿದ್ದಾನೆ’ ಎಂದು ಕಾಮೆಂಟ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವದ ವಿಚಾರ ತುಂಬ ಸೂಕ್ಷ್ಮವಾದದ್ದು. ಕೊರಗಜ್ಜ ದೈವದ ಕಳೆ, ಕಾರ್ಣಿಕ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಫಸ್ಟ್ಲುಕ್ ವಿನ್ಯಾಸಗೊಳಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಮೊದಲಿಗೆ ಕೊರಗಜ್ಜ, ಗುಳಿಗ ಮತ್ತು ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ವಿಶೇಷ ಕೋಲಸೇವೆ ನೀಡಿದ್ದಾರೆ. ಆ ವೇಳೆ ಶ್ರೀ ದೈವಗಳ ಸಮ್ಮುಖದಲ್ಲಿ ದೈವದ ಒಪ್ಪಿಗೆ ಪಡೆಯುವ ಸಲುವಾಗಿ ಅದನ್ನು ಪ್ರದರ್ಶಿಸಿದರು. ಫಸ್ಟ್ಲುಕ್ನ ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಶ್ರೀದೈವಗಳಿಂದ ಅನುಮತಿಯನ್ನು ಭಕ್ತಿಯಿಂದ ಬೇಡಿಕೊಂಡು ಒಪ್ಪಿಗೆ ಪಡೆಯಲಾಯಿತು ಎಂದು ಚಿತ್ರತಂಡ ಇತ್ತೀಚೆಗೆ ತಿಳಿಸಿತ್ತು. ಈಗ ನಿರ್ದೇಶಕ ಸುದೀರ್ ಅತ್ತಾವರ ಈ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದಾರೆ.
Click 👇