ನ್ಯೂಸ್ ನಾಟೌಟ್: ಕ್ರಿಕೆಟ್ ಆಟಗಾರರು ಬೌಂಡರಿ, ಸಿಕ್ಸರ್ ಹೊಡೆದಾಗ ಚೆಂಡು ಪ್ರೇಕ್ಷಕರ ಗ್ಯಾಲರಿಯತ್ತ ನುಗ್ಗುವುದನ್ನು ನಾವು ಟಿವಿಯಲ್ಲಿ ನೋಡಿದ್ದೇವೆ. ಹಾಗೆ ನುಗ್ಗಿದ ಬಹುತೇಕ ಚೆಂಡುಗಳು ವಾಪಸ್ ಆಟಗಾರರ ಕೈ ಸೇರುವುದು ಅಪರೂಪ. ಇಲ್ಲೊಬ್ಬ ಯುವಕ ಐಪಿಎಲ್ ಕ್ರಿಕೆಟ್ ಕೂಟದ ವೇಳೆ ಪ್ರೇಕ್ಷಕರ ಗ್ಯಾಲರಿಯತ್ತ ನುಗ್ಗಿದ ಚೆಂಡನ್ನು ತನ್ನ ಒಳಚಡ್ಡಿಯೊಳಗೆ ಅಡಗಿಸಿಟ್ಟುಕೊಂಡು ಸುದ್ದಿಯಾಗಿದ್ದಾನೆ.
ಮಾತ್ರವಲ್ಲ ಪೊಲೀಸರು ಬಂದು ವಿಚಾರಿಸಿದಾಗ ಸಿಕ್ಕಿಬಿದ್ದು ಪ್ಯಾಂಟ್ ಒಳಗಡೆ ಕೈ ಹಾಕಿ ಅವರಿಗೆ ವಾಪಸ್ ನೀಡಿದ್ದಾನೆ. ಈ ವಿಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗಿದೆ.
ಸೋಮವಾರದ ಐಪಿಎಲ್ ಪಂದ್ಯದಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ರಿಂಕು ಸಿಂಗ್ ಜೆರ್ಸಿ ತೊಟ್ಟಿದ್ದ. ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಪಂದ್ಯದ ಬಾಲ್ ವೀಕ್ಷಕರ ಗ್ಯಾಲರಿಯತ್ತ ಬರುತ್ತದೆ.
ಇದನ್ನು ಕದಿಯಲು ಪ್ರಯತ್ನಿಸಿದ್ದಾನೆ. ಚೆಂಡು ಕದ್ದು ತನ್ನ ಪ್ಯಾಂಟ್ನ ಒಳಗಡೆ ಇರುವ ಒಳಚಡ್ಡಿಯೊಳಗೆ ಬಚ್ಚಿಟ್ಟಿದ್ದ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ವಿಚಾರಿಸಿದಾಗ ಆತ ಪ್ಯಾಂಟ್ನ ಒಳಗಡೆ ಬಚ್ಚಿಟ್ಟ ಚೆಂಡನ್ನು ಹಿಂದಿರುಗಿಸಿದ್ದಾನೆ. ಕಳ್ಳತನ ಮಾಡಿದ ತಪ್ಪಿಗಾಗಿ ಭದ್ರತಾ ಸಿಬ್ಬಂದಿ ಆತನನ್ನು ದೂಡಿ ಕ್ರೀಡಾಂಗಣದ ಹೊರಕ್ಕೆ ಕಳಿಸಿದ್ದಾರೆ.