ಸುಳ್ಯ: ಕೋಳಿ ಮಾಂಸ ಪ್ರಿಯರಿಗೆ ಶಾಕಿಂಗ್ ಸುದ್ದಿ. ಕಳೆದ ಹದಿನೈದು ದಿನಗಳಿಂದ ಫಾರಂ ಕೋಳಿ ಮಾಂಸದ ದರ ಗಗನಕ್ಕೇರಿದೆ. ಇದರಿಂದ ಗ್ರಾಹಕರು ಈಗ ಕೋಳಿ ಅಂಗಡಿ ಕಡೆಗೆ ಮುಖ ಮಾಡುತ್ತಿಲ್ಲ, ಸರಿಯಾಗಿ ವ್ಯಾಪಾರವೂ ಆಗುತ್ತಿಲ್ಲ ಎಂದು ಅಂಗಡಿ ಮಾಲೀಕರು ನೋವು ತೋಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಕೆ.ಜಿಗೆ 120 ರೂ. ಇದ್ದ ಚಿಕನ್ ಬೆಲೆ ಈಗ ಕೆ.ಜಿಗೆ 180 ರೂ.ಗೆ ಬಂದು ತಲುಪಿದೆ. ಕಳೆದ ಎರಡು ವಾರಗಳಿಂದ ಪ್ರತಿ ದಿನವೂ ಹಂತಹಂತವಾಗಿ ಏರಿಕೆ ಕಾಣುತ್ತಿದೆ. ಇಂದು ಮತ್ತೆ 5 ರೂ. ಏರಿಕೆಯಾಗಿದೆ. ಒಟ್ಟಾರೆ 1 ಕೆ.ಜಿ ಚಿಕನ್ ತೆಗೆದುಕೊಂಡರೆ ಈಗ 60 ರೂ. ಹೆಚ್ಚಿಗೆ ಕೊಡಬೇಕಾಗುತ್ತದೆ, 2 ಕೆ.ಜಿ ಚಿಕನ್ ತೆಗೆದುಕೊಳ್ಳುವವನು ಮಾಮೂಲಿಗಿಂತ 120 ರೂ. ಹೆಚ್ಚು ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಕೋಳಿ ಮರಿಗಳ ಸಾಕಾಣಿಕೆಯಲ್ಲಿ ವ್ಯತ್ಯಯವಾಗಿರುವುದೇ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಾಡೂಟ ಏರ್ಪಡಿಸಿದವರು ಈಗ ಕೋಳಿ ಮಾಂಸದ ದರ ಕೇಳಿ ಕಂಗಾಲಾಗಿದ್ದಾರೆ.