ನ್ಯೂಸ್ ನಾಟೌಟ್: ಇಂದು ವಿಶ್ವ ದಾದಿಯರ ದಿನ. ತನ್ನ ನೋವನ್ನು ದೂರವಿಡುತ್ತಾ, ಹಗಲಿರುಳು ಶ್ರಮಿಸುತ್ತಾ, ನಿತ್ಯ ರೋಗಿಯ ಸೇವೆಗೈಯುವ ಲಕ್ಷಾಂತರ ದಾದಿಯರ (ನರ್ಸ್) ಸೇವೆಯನ್ನು ನಾವೆಲ್ಲರೂ ಸ್ಮರಿಸಲೇಬೇಕು. ದೇಶ ರಕ್ಷಣೆಗೆ ಸೈನಿಕರು ಬೇಕು. ಅಂತೆಯೇ ಮನುಕುಲದ ಆರೋಗ್ಯ ರಕ್ಷಣೆಗೆ ದಾದಿಯರ ಸೇವೆ ಬೇಕು. ತಾನು ತನ್ನವರು, ತನ್ನ ಕುಟುಂಬ ಅನ್ನೋದನ್ನು ಲೆಕ್ಕಿಸದೆ ರೋಗಿಯ ಸೇವೆಗಾಗಿ ನಿರಂತರವಾಗಿ ಬದುಕನ್ನು ಸವೆಸುವ ದಾದಿಯರ ಕರ್ತವ್ಯವನ್ನು ಕೇವಲ ಪದಗಳಿಂದ ಬಣ್ಣಿಸೋದು ಕಷ್ಟ. ಅವರೆಲ್ಲರು ಕೂಡ ಸಮಾನ ಗೌರವಕ್ಕೆ ಅರ್ಹರು.
ವಿಶ್ವ ದಾದಿಯರ ದಿನವನ್ನು ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನದ ಸವಿನೆನಪಿಗಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಮೇ12 ರಂದು ಸಂಭ್ರಮಿಸಲಾಗುತ್ತದೆ. ದಾದಿಯರು ಸದಾ ವೈದ್ಯರ ಜೊತೆಗಿದ್ದು ಸೂಕ್ತ ಮಾರ್ಗದರ್ಶನಗಳೊಂದಿಗೆ ಕರ್ತವ್ಯ ನಿಭಾಯಿಸ್ತಾರೆ. ವೈದ್ಯರು ಹೇಳಿದ್ದನ್ನು ಪಾಲಿಸಿ ರೋಗಿಯು ಆದಷ್ಟು ಬೇಗ ಗುಣವಾಗುವಂತೆ ನೋಡಿಕೊಳ್ತಾರೆ. ಎಷ್ಟೋ ಸಲ ತಮ್ಮದು ಊಟ ಆಗದಿದ್ದರೂ ರೋಗಿಯ ಊಟ ಆಯ್ತಾ, ಮದ್ದು ಕುಡಿದ್ರಾ..? ಅಂತ ಕೇಳ್ತಾರೆ. ಅಂತಹ ದಾದಿಯರ ಸೇವೆಯೇ ಅನುಪಮ ಮತ್ತು ಅನನ್ಯ. ರೋಗಿಯ ಜೀವ ಉಳಿಸುವುದಕ್ಕೆ ಹೋರಾಡುವ ಸಮಸ್ತ ದಾದಿಯರಿಗೆ ಮತ್ತೊಮ್ಮೆ ‘ನ್ಯೂಸ್ ನಾಟೌಟ್’ ಡಿಜಿಟಲ್ ಮಾಧ್ಯಮ ವತಿಯಿಂದ ವಿಶ್ವ ದಾದಿಯರ ದಿನದ ಶುಭಾಶಯಗಳು.