ನ್ಯೂಸ್ ನಾಟೌಟ್: ಇಷ್ಟಪಟ್ಟ ಹುಡುಗಿ ಜೊತೆ ಮದುವೆ ಆಗೋಕೆ ಆಗಿಲ್ಲ ಎಂದು ರೊಚ್ಚಿಗೆದ್ದು ಮಚ್ಚು ಹಿಡಿದು ಮನೆಯವರ ಮೇಲೆಲ್ಲ ದಾಳಿ ಮಾಡಿದ್ದಲ್ಲದೆ ಯುವತಿಯನ್ನು ಮನೆಯಿಂದ ಎಳೆದೊಯ್ದು ಆಕೆಯ ತಲೆ ಕತ್ತರಿಸಿ ರುಂಡ ಕೊಂಡೊಯ್ದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಗಳು ನಡೆದಿದೆ.
ಆರೋಪಿ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿ ರುಂಡ ಇರಿಸಿದ ಜಾಗಕ್ಕೆ ಸ್ಥಳ ಮಹಜರು ನಡೆಸುವುದಕ್ಕೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಕೊಲೆ ಮಾಡಿರುವ ಪ್ರಕಾಶ್ ಅಕ್ಷರಶಃ ರಾಕ್ಷಸನಂತೆ ಕ್ರೌರ್ಯ ಮೆರೆದಿದ್ದಾನೆ. ಸೋಮವಾರಪೇಟೆ ಪೊಲೀಸರು ಸ್ಥಳ ಮಹಜರು ನಡೆಸುವುದಕ್ಕೆ ಕರೆದುಕೊಂಡ ಹೋದ ಸಂದರ್ಭದಲ್ಲಿ ಆತ ಬಾಲಕಿಯ ತಲೆಯನ್ನು ಪೊದೆ ಸಮೀಪದ ಮರವೊಂದರಲ್ಲಿ ಇರಿಸಿದ್ದ. ಅಲ್ಲಿಯೇ ಆಕೆಯ ಚಪ್ಪಲಿ ಕೂಡ ಸಿಕ್ಕಿತ್ತು. ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳ ಮಹಜರು ನಡೆಸುವುದಕ್ಕೆ ಬಂದ ಪೊಲೀಸರ ಎದುರಲ್ಲೇ ವಿಚಿತ್ರ ಘಟನೆ ನಡೆಯಿತು. ಆರೋಪಿಯನ್ನು ಕರೆ ತಂದ ಸಂದರ್ಭದಲ್ಲಿ ಬಾಲಕಿಯ ಸಹೋದರ ಕೂಡ ಪೊಲೀಸರ ಜೊತೆಗಿದ್ದ. ಈ ವೇಳೆ ಸಹೋದರಿಯ ರುಂಡವನ್ನು ನೋಡುತ್ತಿದ್ದಂತೆ ಬಾಲಕಿಯ ಸಹೋದರ ಏಕಾಏಕಿ ಕಿರುಚಾಡಿದ್ದಾನೆ, ಮೈಮೇಲೆ ಶಕ್ತಿ ಬಂದಂತೆ ವರ್ತಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಹಿಡಿದುಕೊಂಡಿದ್ದಾರೆ. ಈ ಘಟನೆಯಿಂದ ಪೊಲೀಸರು ಕೂಡ ಒಂದು ಗಳಿಗೆ ಶಾಕ್ ಗೆ ಒಳಗಾಗಿದ್ದಾರೆ.
ಹತ್ತನೇ ಕ್ಲಾಸ್ ಓದುತ್ತಿದ್ದ ಮೀನಾ ಇನ್ನೂ ಅಪ್ರಾಪ್ತೆ ಆಗಿದ್ದಳು. ಈಕೆಗೆ ನಿಶ್ಚಿತಾರ್ಥ ಮಾಡುವುದಕ್ಕೆ ತಯಾರಿ ನಡೆದಿತ್ತು. ಇದನ್ನು ಪೊಲೀಸರ ಸಮ್ಮುಖದಲ್ಲಿ ತಡೆಯಲಾಗಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿ ಪ್ರಕಾಶ್ ಮೀನಾಳನ್ನು ಎಳೆದೊಯ್ದು ಕತ್ತು ಕೊಯ್ದಿದ್ದ. ನಂತರ ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದ. ಭೀಕರ ಘಟನೆಯು ಕೊಡಗಿನ ಜನರನ್ನು ಬೆಚ್ಚಿ ಬೀಳಿಸಿತ್ತು.
ಬಾಲಕಿಯನ್ನು ಆರೋಪಿ ಪ್ರಕಾಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದು ಭೀಕರವಾಗಿ ಹತ್ಯೆ ಮಾಡಿದ್ದ.