ನ್ಯೂಸ್ ನಾಟೌಟ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ SSLC ವಿದ್ಯಾರ್ಥಿಯ ರುಂಡ ಕಡಿದ ಭೀಕರ ಕೃತ್ಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ.
ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಪ್ರಕಾಶ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಪೊಲೀಸರು ಸ್ಥಳ ಮಹಜರು ಮಾಡುವುದಕ್ಕಾಗಿ ಪ್ರಕಾಶ್ ನನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿಯು ರುಂಡ ಬಿಸಾಕಿದ ಜಾಗವನ್ನು ತೋರಿಸಿದ್ದಾನೆ.
ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಪೊದೆಯೊಂದರಲ್ಲಿ ರುಂಡ ಪತ್ತೆಯಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆರೋಪಿ ಪ್ರಕಾಶ್ (33 ವರ್ಷ) ಹುಡುಗಿಯನ್ನು ಕೊಂದ ಬಳಿಕ ಆಕೆಯ ತಲೆಯನ್ನು ಕಡಿದು ತೆಗೆದುಕೊಂಡು ಹೋಗಿದ್ದ. ದಟ್ಟವಾದ ಕಾಡಿನಲ್ಲಿ ಅವಿತು ಕುಳಿತುಕೊಂಡಿದ್ದ, ಕೂಡಲೇ ಆತನನ್ನು ಬಂಧಿಸಲಾಯಿತು. ಆದರೆ ಇದುವರೆಗೆ ರುಂಡ ಎಲ್ಲಿದೆ ಅನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ಕೆಲವು ಮಹತ್ವದ ವಿಚಾರಗಳನ್ನು ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಆಕೆಯ ತಲೆಯನ್ನು ಕಡಿದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಆರಂಭದಲ್ಲಿ ತಿಳಿಸಿದ್ದರು. ಆದರೆ ಇದು ಸುಳ್ಳು ಅನ್ನುವುದನ್ನು ಆ ನಂತರ ಸ್ಪಷ್ಟಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಶವ ಸಿಕ್ಕಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದ್ದ ಬಳಿಕ ಆತನನ್ನು ದಟ್ಟ ಕಾಡಿನೊಳಗಿಂದ ಬಂಧಿಸಲಾಯಿತು.