ನ್ಯೂಸ್ ನಾಟೌಟ್: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ (ಮೇ 10) ಭಕ್ತರಿಗಾಗಿ ತೆರೆಯಲಿವೆ. ಪ್ರತೀ ವರ್ಷ ಹಿಮಾಲಯದಲ್ಲಿ ನೆಲೆ ನಿಂತಿರುವ ಮಹಾದೇವನ ಈ ದೇಗುಲಗಳನ್ನು ಹಿಮಪಾತದಿಂದಾಗಿ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬೇಸಿಗೆಯ ಆರಂಭದಲ್ಲಿ ಮತ್ತೆ ತೆರೆಯಲಾಗುತ್ತದೆ.
ಕೇದಾರನಾಥ ಹಾಗೂ ಯಮುನೇತ್ರಿ ದೇಗುಲಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುತ್ತದೆ. ಗಂಗೋತ್ರಿ ದೇಗುಲ ಮಧ್ಯಾಹ್ನ 12.20ಕ್ಕೆ ತೆರೆಯಲಿದೆ ಎಂದು ಸಮಿತಿ ತಿಳಿಸಿದೆ. ಕೇದಾರನಾಥ ಧಾಮ ಯಾತ್ರೆಗೆ ನೋಂದಾಯಿಸಲು ಭಕ್ತರು badrinath-kedarnath.gov.in ವೆಬ್ಸೈಟ್ ಅಥವಾ https://uttarakhandtourism.gov.in/ ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಕೇದಾರನಾಥ ಧಾಮಕ್ಕೆ ಭೇಟಿ ನೀಡಬಹುದು. ಚಾರ್ಧಾಮದ ಮತ್ತೊಂದು ದೇಗುಲ ಬದರಿನಾಥ, ಮೇ 12ರಂದು ಬೆಳಿಗ್ಗೆ ತೆರೆಯಲಿದೆ. ಕೇದಾರನಾಥ ದೇಗುಲವನ್ನು 20 ಕ್ವಿಂಟಲ್ ಹೂವುಗಳಿಂದ ಸಿಂಗರಿಸಲಾಗುವುದು ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.