ನ್ಯೂಸ್ ನಾಟೌಟ್: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಸಾಂತ್ವನ ಹಾಗೂ ಆತ್ಮಸ್ಥೈರ್ಯ ತುಂಬುವ ಮೂಲಕ ಅವರಿಗೆ ನೆರವಾಗಬೇಕು ಎಂದು ಶಾಸಕಿ ನಯನಾ ಮೋಟಮ್ಮ ಎಂದು ಹೇಳಿದರು. ‘ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಕೃತ್ಯ ಇದು. ಇದರಲ್ಲಿ ಯಾರೇ ಬಲಾಡ್ಯರಾದರೂ ಸಹ ಅವರಿಗೆ ತಕ್ಕ ಶಾಸ್ತಿಯಾಗಬೇಕು. ಸುಸಂಸ್ಕೃತ ರಾಜಕಾರಣ ಕುಟುಂಬದಿಂದ ಬಂದಿರುವ ಇಂತಹ ವ್ಯಕ್ತಿ ಸಂಸದರಾಗಲು ಯೋಗ್ಯತೆ ಇಲ್ಲ ಎಂದಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ನಮ್ಮ ಮಾತೃ ಸಮಾನರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕುಟುಂಬದ ಪರಿಸ್ಥಿತಿ ಇವತ್ತು ಏನಾಗಿದೆ.
ಪ್ರತೀ ಬಾರಿಯೂ ಸಹ ಮಹಿಳೆಯರಿಗೆ ನಮ್ಮ ಪಕ್ಷ ಮೀಸಲಾತಿ ನೀಡಿದೆ ಎಂದು ಹೇಳುವ ಪಕ್ಷದ ಕಥೆ ಅದೋಗತಿಗಿಳಿದಿದೆ. ಆ ಕುಟುಂಬವೇ ತಲೆ ತಗ್ಗಿಸುವಂತಹ ಕೆಲಸ ಮಾಡಿರುವ ಇಂತಹವರಿಗೆ ಕಠಿಣ ಶಿಕ್ಷೆ ನೀಡುವ ಜೊತೆಗೆ ದೇಶದಿಂದಲೇ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು. ‘ಒಬ್ಬ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಸರ್ಕಾರ ಸಾಂತ್ವನ ಹೇಳುವುದರ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಹೆಣ್ಣುಮಕ್ಕಳು ಸಮಾಜದಲ್ಲಿ ತಲೆ ಎತ್ತಿ ಬದುಕಲು ಕಷ್ಟವಾಗುತ್ತದೆ.
ಸಂತ್ರಸ್ಥೆಯರು ತಮ್ಮ ಕುಟುಂಬಸ್ಥರಿಗೆ ಇಂತಹ ಪರಿಸ್ಥಿತಿಯನ್ನು ಉತ್ತರಿಸಲಾಗದೆ ಮನೆಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುಂಬಾ ನೊಂದಿರುವ ಕುಟುಂಬದ ಹೆಣ್ಣಿಗೆ ಮನೋವೈದ್ಯರನ್ನು ನೇಮಿಸುವ ಮೂಲಕ ಅವರಿಗೆ ಧೈರ್ಯ ತುಂಬಿ ಗೌಪ್ಯವಾಗಿ ಅವರ ಹಿತವನ್ನು ಕಾಯುವ ಕೆಲಸ ಮಾಡಬೇಕು. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣನವರ ಮೇಲೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇದು ಯಾವುದೇ ರಾಜಕೀಯ ಪ್ರೇರಿತವಾದ ವಿಷಯವಲ್ಲ. ಇಂತಹ ವಿಷಯಗಳನ್ನು ಎಸ್ಐಟಿಯಿಂದ ಪೂರ್ಣ ಸತ್ಯ ಹೊರಹಾಕಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಬೇಕು’ ಎಂದರು.