ನ್ಯೂಸ್ ನಾಟೌಟ್: ಆಮಂತ್ರಣ ಇಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಫೋಟೋ ಕ್ಲಿಕ್ಕಿಸಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಅಲ್ಲಿದ್ದವರಿಂದ ಧರ್ಮದೇಟು ತಿಂದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯೊಬ್ಬರ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ.
ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿ ಗಳಿಬ್ಬರು ಬಂದು ಹುಡುಗಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೋಟೋ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ನೆರೆದಿದ್ದವರು ವಿಚಾರಿಸಿದಾಗ ಸಂಪ್ರದಾಯಸ್ಥರೊಬ್ಬರ ಪುತ್ರ ಹೇಳಿದ್ದಕ್ಕಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಏಟು ತಿಂದವರು ತಪ್ಪೊಪ್ಪಿಕೊಂಡು ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.