ನ್ಯೂಸ್ ನಾಟೌಟ್: ಆರೋಗ್ಯ ಇಲಾಖೆ ಆಯುಕ್ತರು ವೇತನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಕವಚ (108 ಆಂಬ್ಯುಲೆನ್ಸ್) ಸಿಬ್ಬಂದಿ ಒಂದು ದಿನದ ಮಟ್ಟಿಗೆ ಮುಷ್ಕರ ಹಿಂಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ಸಂಬಳ ನೀಡದ ಕಾರಣ ಸೋಮವಾರದಿಂದ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಆರೋಗ್ಯ ಇಲಾಖೆ ಆಯುಕ್ತರು ಮಂಗಳವಾರ(ಮೇ.೭) ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ತಿಳಿಸಿದೆ.
ಒಂದು ಕಡೆ ಸಂಬಳ ನೀಡಿಲ್ಲ, ಇನ್ನೊಂದೆಡೆ ಆರೋಗ್ಯ ಕವಚ ಸೇವೆ ಜವಾಬ್ದಾರಿ ಹೊತ್ತಿರುವ ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿರುವುದರಿಂದ ಬೇಸತ್ತು ಸಿಬ್ಬಂದಿ ಸೋಮವಾರ (ಮೇ 6) ರಾತ್ರಿಯಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಕ್ಕೆ ಮುಂದಾಗಿದ್ದರು. ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿ ಇದೆ. ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನವನ್ನು 30 ಸಾವಿರ ರೂ. ಕಡಿತ ಮಾಡಿ ಕೇವಲ 13 ಸಾವಿರ ರೂ. ವೇತನ ನೀಡಿದೆ. ಹೀಗಾಗಿ, ಕಡಿತ ಮಾಡಿದ ವೇತನ ಬಿಡುಗಡೆ ಮಾಡಬೇಕು.
ಒಂದು ವೇಳೆ ವೇತನ ಪಾವತಿ ಮಾಡದಿದ್ದರೆ ಮುಷ್ಕರ ಮಾಡುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ಎಚ್ಚರಿಕೆ ನೀಡಿತ್ತು. ‘ಆರೋಗ್ಯ ಕವಚ ಸಿಬ್ಬಂದಿ ನಿಯಮಬಾಹಿರವಾಗಿ ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧವಿದೆ. 108 ಆಂಬ್ಯುಲೆನ್ಸ್ ಸೇವೆ ನಿಲ್ಲಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ,” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ‘108 ಆಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನ ನೀಡುತ್ತಿದೆ. ಸರಕಾರದ ಬಳಿ ಯಾವುದೇ ಹಣಕಾಸಿನ ತೊಂದರೆ ಇಲ್ಲ,” ಎಂದು ಸ್ಪಷ್ಟಪಡಿಸಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ”108 ಆ್ಯಂಬುಲೆನ್ಸ್ ಯೋಜನೆ ಸುಗಮವಾಗಿ ನಡೆಸಲು 2023-24ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 210.33 ಕೋಟಿ ರೂ. ಅನುದಾನಕ್ಕೆ ಬಜೆಟ್ನಲ್ಲಿ ಅನುಮೋದನೆಯಾಗಿದೆ. ಇದರಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ನಿಗದಿತ 162.40 ಕೋಟಿ ರೂ. ಪೂರ್ಣ ಅನುದಾನವನ್ನು ಅವರಿಗೆ ಬಿಡುಗಡೆಗೊಳಿಸಲಾಗಿದೆ,” ಎಂದು ತಿಳಿಸಿದರು.