ನ್ಯೂಸ್ ನಾಟೌಟ್: ಲೈಂಗಿಕ ಹಗರಣಗಳ ಭಾರೀ ಸುಳಿಗೆ ಸಿಲುಕಿಕೊಂಡು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟಂತೆ ತನಿಖೆಯನ್ನು ಕೈಗೆತ್ತಿಕೊಂಡಿರುವ SIT ಇದೀಗ ‘ಬ್ಲೂ ಕಾರ್ನರ್’ ನೋಟಿಸ್ ಅನ್ನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದೆ.
ಸದ್ಯ SIT ಮೇಲೆ ಈ ಪ್ರಕರಣವನ್ನು ಭೇದಿಸುವಂತಹ ಬಹು ದೊಡ್ಡ ಜವಾಬ್ದಾರಿ ಇದೆ. ಬೆನ್ನಲ್ಲೇ ಸರ್ಕಾರದ ಕಡೆಯಿಂದಲೂ ಒತ್ತಡವಿದೆ. ಸದ್ಯ ಸಂತ್ರಸ್ತ ಮಹಿಳೆಯರು ಒಬ್ಬೊಬ್ಬರಾಗಿಯೇ ತನಿಖೆಗೆ ಸಹಕಾರ ನೀಡುತ್ತಿರುವುದರಿಂದ ಒಂದಷ್ಟು ಕಡೆ ಮಾಹಿತಿಯ ಸಂಗ್ರಹಗಳು ಕೂಡ ನಡೆಯುತ್ತಿದೆ. ಈ ನಡುವೆ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ಸಂತ್ರಸ್ತೆಯರಲ್ಲಿ ಒಬ್ಬರಾಗಿರುವ ಮಹಿಳೆಯನ್ನು ಕರೆದುಕೊಂಡು ಹೋಗಿ ಮಾಹಿತಿಯನ್ನ ಕಲೆ ಹಾಕುವಂತಹ ಕೆಲಸ ಕೂಡ ನಡೆಯುತ್ತಿದೆ.
ಅಪರಾಧ ಪ್ರಕರಣದಲ್ಲಿ ಬೇಕಾಗಿರುವವರ ಮಾಹಿತಿ ಪಡೆಯಲು ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ಇಂಟರ್ ಪೋಲ್ ಅಪರಾಧಿ ಯಾವ ದೇಶಕ್ಕೆ ಸೇರಿದವನು ಮತ್ತು ಯಾವ ದೇಶದಲ್ಲಿ ಇದ್ದಾನೆಯೋ ಆ ದೇಶಗಳಿಗೆ ಮಾತ್ರ ನೋಟಿಸ್ ನೀಡುತ್ತದೆ. ಬ್ಲೂ ಕಾರ್ನರ್ ನೋಟಿಸ್ ಜಾರಿಯಾದ ಮೇಲೆ ಸದಸ್ಯ ರಾಷ್ಟ್ರ ಮಾಹಿತಿ ನೀಡುವುದು ಕಡ್ಡಾಯ. ಸಿಂಪಲ್ ಆಗಿ ಹೇಳೋದಾದ್ರೆ ಅಪರಾಧಿಯ ಚಲನ ವಲನದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳುವುದಕ್ಕೆ ಬ್ಲೂ ಕಾರ್ನರ್ ನೋಟಿಸ್ ನೆರವಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ಮುಂದೆ ರೆಡ್ ಕಾರ್ನರ್ ನೋಟಿಸ್ ನೀಡಲಾಗುತ್ತದೆ. ನೇರವಾಗಿ ಅವರನ್ನು ಸದಸ್ಯ ರಾಷ್ಟ್ರಗಳಿಗೆ ಹೇಳಿ ಬಂಧಿಸುವಂತಹ ಕೆಲಸ ಮಾಡಬಹುದು. ಇವೆಲ್ಲ ಬೆಳವಣಿಗೆಗಳಿಂದ ಸದ್ಯ ಈ ಪ್ರಕರಣ ಭಾರೀ ಕುತೂಹಲ ಕೆರಳಿಸಿದೆ.